ಅಥಣಿ ಮೇಲೆ ಸಾಗುವ ರೈಲು ಮಾರ್ಗ ಪುನರ್ ಪರಿಶೀಲನೆಗೆ ಒತ್ತಾಯ: ಸಂಸದೆ ಪ್ರಿಯಂಕಾ ಜಾರಕಿಹೊಳಿ
ಅಥಣಿ: ಈ ಹಿಂದೆ ಸರ್ವೇ ಆಗಿದ್ದ ಅಥಣಿ ಪಟ್ಟಣದ ಮೇಲೆ ಹಾದು ಹೋಗುವ ಮಿರಜ-ವಿಜಯಪುರವರೆಗಿನ ರೈಲು ಮಾರ್ಗವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದ್ದು, ಅದನ್ನು ಪುನರ್ ಪರಿಶೀಲಿಸುವಂತೆ ಬರುವ ಅಧಿವೇಶನದಲ್ಲಿ ಒತ್ತಾಯಿಸುವುದಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು.
ಅಥಣಿ ಪಟ್ಟಣದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕ್ಷೇತ್ರ ಮತ್ತು ಜಿಲ್ಲೆ ಅಭಿವೃದ್ಧಿಗೆ ರೈಲು ಮಾರ್ಗ ಅತ್ಯಂತ ಅವಶ್ಯ. ಈ ಕುರಿತು ಕಾಂಗ್ರೆಸ್ ಮುಖಂಡರು ಮತ್ತು ಪತ್ರಕರ್ತರು ನಮ್ಮ ಗಮನಕ್ಕೆ ತಂದಿದ್ದಾರೆ. ಇದನ್ನು ಪರಿಶೀಲಿಸಿ ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇನೆ. ಮಾತ್ರವಲ್ಲದೇ ಅಥಣಿ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಕಿರಿಯ ವಯಸ್ಸಿನಲ್ಲಿ ದೇಶಸೇವೆ ಮಾಡುವ ಅವಕಾಶ ನನಗೆ ದೊರೆತಿದೆ. ದೇಶದ ಹಿರಿಯ-ಕಿರಿಯ ರಾಜಕೀಯದಲ್ಲಿ ಅನುಭವ ಹೊಂದಿದ ಎಲ್ಲ ಪಕ್ಷಗಳ ಸಂಸದರೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ದೊರೆತಿರುವುದು ನನಗೆ ಹೆಮ್ಮೆಯ ವಿಷಯ. ಇದಕ್ಕೆ ಕಾರಣರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನನ್ನ ತಂದೆ ಸತೀಶ್ ಜಾರಕಿಹೊಳಿ ಹಾಗೂ ಮುಖಂಡರ ಪ್ರಯತ್ನ ಸಾಕಷ್ಟಿದೆ. ನಮ್ಮ ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದರಿಂದ ನಾನಿವತ್ತು ಸಂಸದೆಯಾಗಿ ಆಯ್ಕೆಯಾಗಲು ಸಾಧ್ಯವಾಯಿತು ಎಂದು ಆಯ್ಕೆಯಾಗಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಪಟ್ಟಣಕ್ಕೆ ಬೇಕಾಗಿರುವುದು ರೈಲು ಮಾರ್ಗ. ಅದನ್ನು ಪುನರ್ ಪರಿಶೀಲಿಸಿಪುನಾರಂಭಿಸಲು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಸಂಸದೆ ಪ್ರಿಯಾಂಕಾ ಅವರಲ್ಲಿ ವಿನಂತಿಸಿದರು. ಅಲ್ಲದೇ ಆಥಣಿ ಮತಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಜೊತೆಗೆ ಅಥಣಿಯಲ್ಲಿ ಸಂಸದರ ಕಚೇರಿ ತೆರೆಯುವಂತೆ ಮನವಿ ಮಾಡಿದರು.
ಪಟ್ಟಣಕ್ಕೆ ಸಂಸದೆಯಾಗಿ ಪ್ರಥಮ ಬಾರಿಗೆ ಆಗಮಿಸಿದ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗಜಾನನ ಮಂಗಸೂಳಿ ಕುಟುಂಬದವರು ಮತ್ತು ಕಾಂಗ್ರೆಸ್ ಕಾಠ್ಯಕರ್ತರು ಸನ್ಮಾನಿಸಿದರು.
ಈ ವೇಳೆ ಸದಾಶಿವ ಬುಟಾಳಿ, ದಿಗ್ವಿಜಯ ಪವಾರ ದೇಸಾಯಿ, ಚಂದ್ರಕಾಂತ ಇಮ್ಮಡಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ರಾವಸಾಬ ಐಹೊಳಿ, ಚಿದಾನಂದ ಮುಕನಿ, ರಮೇಶ ಸಿಂದಗಿ, ಅಸ್ಲಮ್ ನಾಲಬಂದ, ಅನೀಲ ಸುಣದೋಳಿ, ಸುನೀಲ ಸಂಕ, ಸಂಜು ಕಾಂಬಳೆ, ಚಿದಾನಂದ ತಳಕೇರಿ, ಸುನೀತಾ ಐಹೊಳಿ, ಪ್ರಮೋದ ಬಿಳ್ಳೂರ, ಉದಯ ಸೂಳಸಿ, ವಿಶ್ವನಾಥ ಗಡದೆ ಇತರರಿದ್ದರು.