ಬೆಳಗಾವಿ
ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ನೋವಿನಲ್ಲಿ ಶೋಕಾಚರಣೆಯ ನಡೆಸುತ್ತಿದ್ದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಸಂವಿಧಾನ ಸಂಭಾಷಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದನ್ನು ಖಂಡಿಸಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಧಿಕೃತವಾಗಿ ಮೂರು ದಿನಗಳ ಕಾಲ ಸರಕಾರಿ ಕಾರ್ಯಕ್ರಮ ರದ್ದು ಪಡಿಸಿದರೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ತನಗೇನು ಸಿದ್ದಗಂಗಾ ಶ್ರೀಗಳ ಅಗಲಿಕೆಯು ಸಂಬಂಧವಿಲ್ಲ ಎಂದು ವರ್ತಿಸಿರುವುದು ಖೇದಕರ ಸಂಗತಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ದೇಶ ವಿರೋಧಿ ಹೇಳಿಕೆ ನೀಡಿದ್ದ ಕನ್ಹಯ್ಯಕುಮಾರಂಥಹ ದೇಶ ದ್ರೋಹಿಗಳನ್ನು ಆಹ್ವಾನಿಸಿರುವುದನ್ನು ರಾಜ್ಯ ಬಿಜೆಪಿ ಗಂಭೀರವಾಗಿ ಪರಿಗಣಿಸುತ್ತದೆ. ಶೋಕಾಚರಣೆಯ ನಡುವೆಯೂ ಸರಕಾರಿ ಕಾರ್ಯಕ್ರಮದಲ್ಲಿ ಭಾಗಿಯಾದ ಸುದ್ದಿ ಮಾಡಿದ್ದ ಮಾಧ್ಯಮಗಳನ್ನು ಉಗ್ರಗಾಮಿಗಳಿಗೆ ಹೋಲಿಸಿ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ಸರಿಯಾದುದ್ದಲ್ಲ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸುವ ರಾಜ್ಯ ಸರಕಾರ ಹೊರಡಿಸಿದ ಆದೇಶವನ್ನು ಧಿಕ್ಕರಿಸಿ ಕಾರ್ಯಕ್ರಮ ನಡೆಸಿದ ಪ್ರಿಯಾಂಕ ಖರ್ಗೆ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ದೀಪಕ ಜಮಖಂಡಿ, ಕಿರಣ ಜಾಧವ, ಲೀನಾ ಟೋಪಣ್ಣವರ, ಸವಿತಾ ಗುಡ್ಡಕಾಯು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
