ಬೆಳಗಾವಿ: ಸದಾಶಿವ ನಗರದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ದರ್ಜೆಯಲ್ಲಿ ನಿರ್ಮಿಸಿರುವ ರಡ್ಡಿ ಭವನ ಜ.25ರಂದು ಶನಿವಾರ ಲೋಕಾರ್ಪಣೆಗೊಳ್ಳಲಿದೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ ಈ ಬಗ್ಗೆ ತಿಳಿಸಿದರು. 2017ರ ಮಾ.22ರಂದು ನಮ್ಮ ಸಂಘದ ನೋಂದಣಿ ಮಾಡಿದ್ದೆವು. 13,270 ಚದರ ಅಡಿಯಲ್ಲಿ ತಲೆ ಎತ್ತಿರುವ ಭವನ ನಿರ್ಮಾಣಕ್ಕೆ ದಿ.ಭೀಮರಡ್ಡಿ ಮಳಲಿ 2 ಕೋಟಿ ರೂ. ಬೆಲೆಬಾಳುವ ಜಾಗವನ್ನು ದಾನವನ್ನಾಗಿ ನೀಡಿದ್ದರು. ನಮ್ಮ ಸಮಾಜದ ದಾನಿಗಳು ನೀಡಿದ ಸಹಕಾರದಿಂದ ಒಂದೂವರೆ ವರ್ಷದಲ್ಲಿ ಈ ಸುಸಜ್ಜಿತ ಭವನ ನಿರ್ಮಿಸಿದ್ದೇವೆ ಎಂದು ಹೇಳಿದರು.
ಭವನದ ತಳ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳು ಇರಲಿವೆ. 2ನೇ ಮಹಡಿಯಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಗಾಗಿ ಸಭಾಂಗಣ ನಿರ್ಮಿಸಲಾಗಿದೆ. 3 ಮತ್ತು 4ನೇ ಮಹಡಿಗಳಲ್ಲಿ 46 ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
25ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಹರಿಹರದ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೇಂದ್ರ ಸಚಿವ ಸುರೇಶ ಅಂಗಡಿ, ಮಾಜಿ ಸಚಿವ ಎಚ್.ಕೆ.ಪಾಟೀಲ, ಶಾಸಕ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ, ಬೆಂಗಳೂರಿನ ಕರ್ನಾಟ ರಡ್ಡಿ ಜನ ಸಂಘದ ನಿರ್ದೇಶಕ ಡಿ.ಎನ್.ಲಕ್ಷ್ಮಣ ರೆಡ್ಡಿ ಇತರರು ಪಾಲ್ಗೊಳ್ಳುವರು. ಇದೇವೇಳೆ, ದಾನಿಗಳನ್ನು ಸತ್ಕರಿಸಲಾಗುವುದು ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷ ಬಸವರಾಜ ಬಾವಲತ್ತಿ, ಬಿ.ಎನ್.ನಾಡಗೌಡ, ಟಿ.ಕೆ.ಪಾಟೀಲ, ರಾಜೇಂದ್ರ ಪಾಟೀಲ, ವಿ.ಆರ್.ಮಳ್ಳಿಗೇರಿ, ಗಿರೀಶ ಮಳಲಿ, ಮಂಜುನಾಥ ಪಾಟೀಲ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
