Breaking News

ಬೆಳಗಾವಿಯಲ್ಲಿ ಸೊಂಕಿತರ ಸೆಕೆಂಡ್ರಿ ಕಾಂಟ್ಯಾಕ್ಟ್ ಹೊಂದಿದವರ ಪತ್ತೆ ಕಾರ್ಯ ಶುರು

ಕೋವಿಡ್-೧೯ : ಚಿಕ್ಕೋಡಿಯಲ್ಲಿ ಜನಪ್ರತಿನಿಧಿಗಳ ಸಭೆ
———————————————————————-
“ಆಶಾ” ಮೇಲೆ ಹಲ್ಲೆ ಮಾಡಿದರೆ ಪ್ರಕರಣ ದಾಖಲಿಸಲು ಸಚಿವ ಜಗದೀಶ್ ಶೆಟ್ಟರ್ ಕಟ್ಟುನಿಟ್ಟಿನ ಸೂಚನೆ

ಬೆಳಗಾವಿ, ಏ.೭(ಕರ್ನಾಟಕ ವಾರ್ತೆ): ಕುಡಚಿ ಸೇರಿದಂತೆ ಸೋಂಕು ದೃಢಪಟ್ಟಿರುವ ಪ್ರದೇಶನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಚಿಕ್ಕೋಡಿಯ ಲೋಕೋಪಯೋಗಿ ಇಲಾಖೆಯ ನೌಕರರ ಭವನದಲ್ಲಿ ಮಂಗಳವಾರ(ಏ.೭) ನಡೆದ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಡಚಿ ಪಟ್ಟಣವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿರುವುದರಿಂದ ಆರೋಗ್ಯದ ದೃಷ್ಟಿಯಿಂದ ಎಲ್ಲರ ಮೇಲೆ ನಿಗಾ ಇಡುವ ಅಗತ್ಯತೆ ಕುರಿತು ಮೊದಲು ಸೂಕ್ತ ತಿಳಿವಳಿಕೆ ನೀಡಬೇಕು. ಆದಾಗ್ಯೂ ಒಪ್ಪದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ನೆರೆಯ ರಾಜ್ಯದ ಗಡಿಗಳ ಮೂಲಕ ನಡೆದುಕೊಂಡು ಬರುತ್ತಿರುವವರ ಮೇಲೆ ನಿರಂತರ ನಿಗಾ ವಹಿಸಬೇಕು.
ಈಗಾಗಲೇ ಬಂದಿರುವವರಿಗೆ ಸೂಕ್ತ ವಸತಿ ಮತ್ತು ಊಟೋಪಹಾರದ ವ್ಯವಸ್ಥೆಯನ್ನು ಮುಂದವರಿಸಬೇಕು.
ಆಯಾ ಪ್ರದೇಶ ಅಥವಾ ವಾರ್ಡಗಳ ಜ‌ಪ್ರತಿನಿಧಿಗಳು ಉಚಿತ ಹಾಲು ವಿತರಣೆಯ ನೇತೃತ್ವ ವಹಿಸಿದರೆ ವಿತರಣೆ ವ್ಯವಸ್ಥೆ ಸುಧಾರಣೆಯಾಗುತ್ತದೆ ಎಂದು ತಿಳಿಸಿದರು.

ಎರಡು ತಿಂಗಳ ಪಡಿತರ ಧಾನ್ಯ ವಿತರಣೆ ಕಾರ್ಯ ನಡೆದಿದ್ದು, ಯಾರಾದರೂ ಜನರಿಂದ ಅಕ್ರಮವಾಗಿ ಹಣ ಪಡೆದರೆ ಅಥವಾ ಕಡಿಮೆ ಪ್ರಮಾಣದ ಧಾನ್ಯ ನೀಡಿದರೆ ಅಂತಹ ಅಂಗಡಿಗಳ ಲೈಸೆನ್ಸ್ ರದ್ದುಪಡಿಸುವಂತೆ ಸಚಿವರು ಸೂಚನೆ ನೀಡಿದರು.
ಕಂಟೈನ್ಮೆಂಟ್ ಝೋನ್ ಸೇರಿದಂತೆ ಉಳಿದ ಕಡೆಗಳಲ್ಲಿ ದಿನಸಿ, ತರಕಾರಿ ಮತ್ತಿತರ ಅಗತ್ಯ ಸಾಮಗ್ರಿಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಕುಡಚಿಯಲ್ಲಿ ನಾಲ್ಕು ಪಾಸಿಟಿವ್ ಪ್ರಕರಣ ಇನ್ನಷ್ಟು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಎಲ್ಲ ಜಾತಿಧರ್ಮದವರಲ್ಲಿ ಸೋಂಕು ಕಂಡುಬಂದಿದೆ. ಆದ್ದರಿಂದ ತಬ್ಲಿಘಿ ಜಮಾತ್ ಗೆ ಹೋಗಿಬಂದವರು ಸ್ವಯಂಪ್ರೇರಣೆಯಿಂದ ಮಾಹಿತಿಯನ್ನು ನೀಡುವ ಮೂಲಕ ಕರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಲು ಮನವಿ.

ಸ್ವಯಂಪ್ರೇರಣೆಯಿಂದ ಆರೋಗ್ಯ ಪರೀಕ್ಷೆಗೆ ಮುಂದಾಗುವ ಮೂಲಕ ತಮ್ಮ ಕುಟುಂಬ ಮತ್ತು ಸಾಮಾಜಿಕ ಆರೋಗ್ಯ ರಕ್ಷಣೆಗೆ ಸಹಕರಿಸಬೇಕು. ಮಾಹಿತಿಯನ್ನು ಮುಚ್ಚಿಟ್ಟರೆ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.

ಧಾರ್ಮಿಕ ಮುಖಂಡರನ್ನು ಬಳಸಿಕೊಂಡು ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಸೂಕ್ತ ಜಾಗೃತಿ ಮಾಡಿಸಬೇಕು. ಅಂದಾಗ ಮಾತ್ರ ಅವರು ಸಹಕಾರ ನೀಡುತ್ತಾರೆ. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಕುಡಚಿ ಶಾಸಕ ಪಿ.ರಾಜೀವ ತಿಳಿಸಿದರು.

ತುರ್ತು ಚಿಕಿತ್ಸೆ; ಪರ್ಯಾಯ ವ್ಯವಸ್ಥೆಗೆ ಸೂಚನೆ:

ಹೃದಯಾಘಾತ, ಹೆರಿಗೆ ಸೇರಿದಂತೆ ವಿವಿಧ ಬಗೆಯ ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ಮುಂದಾಗುವ ಖಾಸಗಿ ಕ್ಲಿನಿಕ್ ಹಾಗೂ ವೈದ್ಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಜನರಿಗೆ ಅನಾನುಕೂಲ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ತಿಳಿಸಿದರು.

ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ಖಾಸಗಿ ಕ್ಲಿನಿಕ್ ಆರಂಭಿಸಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಮತ್ತಿತರ ನಿಯಮಾವಳಿ ಪಾಲಿಸಬೇಕು ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಗೆ ಸಿದ್ಧ:

ಶಾಸಕ ಕುಮಠಳ್ಳಿ ಮಾತನಾಡಿ, ಸಾರ್ವಜನಿಕರು ತಮ್ಮ ಬಳಿ ಬೇರೆ ಯಾವುದೇ ಚಿಕಿತ್ಸೆಗೆ ಬಂದರೂ ಕರೊನಾ ಸೋಂಕು ಇರುವ ಬಗ್ಗೆ ಗೊತ್ತಿರುವುದಿಲ್ಲ. ಇದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಯಂಪ್ರೇರಣೆಯಿಂದ ಸೇವೆ ನೀಡಲು ಸಿದ್ಧವಿರುವುದಾಗಿ ಖಾಸಗಿ ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು.
ಇದನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.

ಕರ್ನಾಟಕ ವಿಧಾನಪರಿಷತ್ತಿನ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಕುಡಚಿಯಲ್ಲಿ ಬರೀ ಆಶಾ ಕಾರ್ಯಕರ್ತೆಯರಿಂದ ಮಾಹಿತಿಯನ್ನು ಸಂಗ್ರಹಿಸುವುದು ಕಷ್ಟಕರ. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸೌಹಾರ್ದ ಸಭೆಯನ್ನು ಕರೆದು ಜನರ ಮನವೊಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಉಚಿತ ಹಾಲು ಪೂರೈಕೆ ವ್ಯವಸ್ಥೆ ಸಮರ್ಪಕವಾಗಿಲ್ಲ; ಜನರಿಗೆ ಸರಿಯಾಗಿ ಹಾಲು ತಲುಪುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು.

ಪಡಿತರ ವಿತರಣೆಗೆ ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ ಎಂದು ಶಾಸಕ ದುರ್ಯೋಧನ ಐಹೊಳೆ ಸಭೆಯ ಗಮನಕ್ಕೆ ತಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಅನೇಕ ಕಡೆ ಇನ್ನೂ ಖಾಸಗಿ ಕ್ಲಿನಿಕ್ ತರೆಯುತ್ತಿಲ್ಲ; ಈ ಬಗ್ಗೆ ಕ್ರಮ‌ಕೈಗೊಳ್ಳುವಂತೆ ತಿಳಿಸಿದರು.
ಈ ಕುರಿತು ಚಿಕ್ಕೋಡಿಯಲ್ಲೂ ಖಾಸಗಿ ಕ್ಲಿನಿಕ್ ಮತ್ತು ವೈದ್ಯರ ಸಭೆ ಕರೆಯುವಂತೆ ಸಭೆಯಲ್ಲಿ ನಿರ್ದೇಶನ ನೀಡಲಾಯಿತು.
ಆಶಾ‌ ಕಾರ್ಯಕರ್ತೆಯರ ಜತೆ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳುತ್ತಿರುವುದರಿಂದ ಅವರಿಗೂ ಕೂಡ ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ಸಾಮಗ್ರಿಗಳನ್ನು ಪೂರೈಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟಾರೆ ೧೦೧೮ ಜನರ ಮೇಲೆ ನಿಗಾ ವಹಿಸಲಾಗಿದ್ದು, ಅದರಲ್ಲಿ ೨೦೩ ಜನರು ಈಗಾಗಲೇ ೨೮ ದಿನ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಏಳು ಪ್ರಕರಣಗಳು ದೃಢಪಟ್ಟಿರುತ್ತವೆ. ೬೯ ನೆಗೆಟಿವ್ ಬಂದಿದ್ದು, ಏಳು ಮಾದರಿಗಳ ವರದಿ ನಿರೀಕ್ಷಿಸಲಾಗಿದೆ. ಅದೇ ರೀತಿ ಮಾದರಿ ಸಂಗ್ರಹ ಪ್ರಕ್ರಿಯೆ ನಡೆದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ವಿವರಿಸಿದರು.

ಡಾ. ಶೈಲಜಾ ತಮ್ಮಣ್ಣವರ, ಕುಡಚಿ ಪಟ್ಟಣದಲ್ಲಿ ೨೫ ಸಾವಿರ ಜನಸಂಖ್ಯೆ ಹೊಂದಿದ್ದು, ಆರು ತಂಡಗಳನ್ನು ರಚಿಸಿ ಮನೆ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದ ಕುಡಚಿಯ ೨೩ ಜನರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ ತಿಳಿಸಿದರು.
ಚಿಕ್ಕೋಡಿ ವಿಭಾಗದ ಐದು ತಾಲ್ಲೂಕುಗಳಲ್ಲಿ ೧೯೫ ಜನರು ಬಂದಿದ್ದು, ಅವರಿಗೆ ಗೃಹ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

ಕಂಟೈನ್ಮೆಂಟ್ ಝೋನ್ ಆಗಿರುವ ಕುಡಚಿಯ ಪ್ರತಿಯೊಬ್ಬ ನಾಗರಿಕರ ಆರೋಗ್ಯದ ಮೇಲೆ ನಿಗಾ ವಹಿಸುವ ಕೆಲ ನಡೆದಿದ್ದು, ಜನಸಂಚಾರ ತಡೆಗೆ ಬ್ಯಾರಿಕೇಡ್ ಮತ್ತಿತರ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ತಪಾಸಣೆ ಕೆಲಸ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಮಾರ್ಚ್ ತಿಂಗಳಲ್ಲಿ ೬೭ ಜನರು ತಬ್ಲಿಘಿ ಜಮಾತ್ ನಿಂದ ಬಂದಿದ್ದು, ಅವರೆಲ್ಲರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅವರೆಲ್ಲರನ್ನೂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇದ್ರ ಕೆ.ವಿ. ಮಾತನಾಡಿ, ಪ್ರೈಮರಿ ಕಾಂಟ್ಯಾಕ್ಟ್ ಇರುವ ಎಲ್ಲರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದ್ದು, ಅವರಿಂದ ಮಾಹಿತಿಯನ್ನು ಸಂಗ್ರಹಿಸಿ ಸೆಕೆಂಡರಿ ಕಾಂಟ್ಯಾಕ್ಟ್ ಇರುವವರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಜಿಲ್ಲೆಯಲ್ಲಿ ಏಳು ಹೊರತುಪಡಿಸಿ ಹೊಸ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದರು.
ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಪೂರೈಸಲು ಹಣಕಾಸಿನ ತೊಂದರೆಯಿಲ್ಲ. ಒಂದು ಸಮಸ್ಯೆ ಇದ್ದರೆ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಜವಳಿ ಸಚಿವರಾದ ಶ್ರೀಮಂತ ಪಾಟೀಲ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಮಹೇಶ್ ಕುಮಠಳ್ಳಿ, ಪಿ‌.ರಾಜೀವ್, ದುರ್ಯೋಧನ ಐಹೊಳೆ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಮತ್ತಿತರರು ಉಪಸ್ಥಿತರಿದ್ದರು.
**”*

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *