ಪ್ರವಾಹ ಹಾನಿ: ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ- ಸಚಿವ ರಮೇಶ್ ಜಾರಕಿಹೊಳಿ
ಬೆಂಗಳೂರು, ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಿದ್ದ ಭಾರೀ ಮಳೆ ಹಾಗೂ ಪ್ರವಾಹದಿಂದ ಹಾನಿಗೀಡಾಗಿರುವ ನಾಲೆ ಮತ್ತಿತರ ಕಾಮಗಾರಿಗಳ ದುರಸ್ತಿ ಕಾರ್ಯವು ಪ್ರಗತಿಯಲ್ಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ದೊಡ್ಡಗೌಡರ ಮಹಾಂತೇಶ ಬಸವಂತರಾಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತೀವ್ರ ಹಾನಿಗೊಳಗಾಗಿರುವ ರಸ್ತೆ, ಸೇತುವೆ, ನಾಲೆಗಳ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ತಮ್ಮ ಇಲಾಖೆಗೆ ಹಾಗೂ ನಿಗಮಗಳಿಗೆ ನೀಡಿರುವ ಅನುದಾನದಲ್ಲಿ 248.18 ಕೋಟಿ ರೂ. ಮೊತ್ತದಲ್ಲಿ ಕಾಮಗಾರಿಗಳನ್ನು ಕೈಗೊಂಡಿದ್ದು, ಶೀಘ್ರವಾಗಿ ಈ ಕಾಮಗಾರಿಗಳನ್ನು ಮುಗಿಸುತ್ತೇವೆ ಎಂದು ಸಚಿವರು ತಿಳಿಸಿದರು.
ಕಿತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಹಾಗೂ ಸೇತುವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವನೆ ಸ್ವೀಕಾರವಾಗಿಲ್ಲ. ಆದರೂ ಜಂಟಿ ಸಭೆ ನಡೆಸಿ ಸಮಗ್ರ ಪರಿಹಾರೋಪಾಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಶಾಸಕ ಡಾ.ಅವಿನಾಶ್ ಉಮೇಶ್ ಜಾದವ್ ಅವರ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವರು, ಅಧಿವೇಶನ ಮುಗಿದ ನಂತರ ಚಿಂಚೋಳಿ ಕ್ಷೇತ್ರ ವ್ಯಾಪ್ತಿಯ ನೀರಾವರಿ ಯೋಜನೆ ಬಗ್ಗೆ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.
ಚಂದ್ರಪಳ್ಳಿ ಯೋಜನೆಗೆ 14.73 ಕೋಟಿ ರೂ. ಬೆಣ್ಣೆ ತೋರಾ ಯೋಜನೆಗೆ 522.58 ಕೋಟಿ, ಕೆಳದಂಡೆ ಮುಲ್ಲಾಮಾರಿ ಯೋಜನೆಗೆ 293 ಕೋಟಿ ರೂ. ಹಾಗೂ ದಂಡೋರಿ ನಾಲಾ ಯೋಜನೆಗೆ 358.29 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
***
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ