Breaking News

ನೀರಿನ ಸಮಸ್ಯೆ ಬಗೆಹರಿಸಲು ಮುಂಬಯಿಯಲ್ಲಿ ‘ಮಹಾ’ ಮೀಟೀಂಗ್

ಬೆಳಗಾವಿ)-ಕೃಷ್ಣಾ ನದಿ ನೀರು ಬಳಕೆ, ನೆರೆ ನಿಯಂತ್ರಣಕ್ಕೆ ಸಮನ್ವಯ ಸಮಿತಿ ರಚನೆ ಹಾಗೂ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ವಿನಿಮಯಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಇಲಾಖೆಯ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ನಿಯೋಗವು ಇಂದು ಮಹಾರಾಷ್ಟ್ರ ಸರ್ಕಾರದ ಜತೆ ಚರ್ಚೆ ನಡೆಸಿತು.

ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ರಾಜ್ಯ ನಿಯೋಗವು ಮಹಾರಾಷ್ಟ್ರದ ಜಲಸಂಪನ್ಮೂಲ ಇಲಾಖೆಯ ಸಚಿವರಾದ ಜಯಂತ್ ಪಾಟೀಲ್ ಅವರೊಂದಿಗೆ ಮುಂಬೈಯಲ್ಲಿ ಸಭೆ ನಡೆಸಿತು.

ಆಲಮಟ್ಟಿ ಜಲಾಶಯದ ಎತ್ತರದ ಜತೆಗೆ ಕೃಷ್ಣಾ ನದಿ ನೀರು ಬಳಕೆಗೆ ಸಂಬಂಧಿಸಿದಂತೆ ನ್ಯಾಯಾಧೀಕರಣದ ತೀರ್ಪನ್ನು ಕೇಂದ್ರ ಸರ್ಕಾರ ಇದುವರೆಗೆ ಗೆಜೆಟ್ ನಲ್ಲಿ ಪ್ರಕಟಿಸದಿರುವುದರಿಂದ ಸದ್ಯಕ್ಕೆ ನೀರು ಬಳಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನ್ಯಾಯಾಧೀಕರಣದ ತೀರ್ಪನ್ನು ಗೆಜೆಟ್ ನಲ್ಲಿ ಪ್ರಕಟಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಉಭಯ ರಾಜ್ಯಗಳು ತೀರ್ಮಾನಿಸಿದವು.

ಪ್ರತಿವರ್ಷ ಮಳೆಗಾಲದಲ್ಲಿ ಉಂಟಾಗುತ್ತಿರುವ ನೆರೆಹಾವಳಿಯನ್ನು ನಿಯಂತ್ರಿಸಲು ಸಮನ್ವಯ ಸಮಿತಿ ರಚಿಸಬೇಕು ಎಂಬ ಮಹಾರಾಷ್ಟ್ರ ಸರ್ಕಾರದ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ ರಾಜ್ಯದ ನಿಯೋಗವು ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಹಾಗೂ ಅಧೀಕ್ಷಕ ಎಂಜಿನಿಯರ್ ಅವರನ್ನು ಸಮನ್ವಯ ಸಮಿತಿಯ ಸದಸ್ಯರನ್ನಾಗಿ ನೇಮಿಸುವುದಾಗಿ ತಿಳಿಸಿತು.

ನೀರು ವಿನಿಮಯಕ್ಕೆ ಮಹಾರಾಷ್ಟ್ರ ಮನವಿ:

ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮಹಾರಾಷ್ಟ್ರದಿಂದ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹಣದ ಬದಲು ಪರಸ್ಪರ ನೀರು ವಿನಿಮಯ ಮಾಡಿಕೊಳ್ಳುವ ಅಗತ್ಯವಿದೆ ಎಂದು ಮಹಾರಾಷ್ಟ್ರ ಸರ್ಕಾರ ಪ್ರತಿಪಾದಿಸಿತು.

ಬೇಸಿಗೆ ಕಾಲದಲ್ಲಿ ಕರ್ನಾಟಕದಲ್ಲಿ ಕುಡಿಯು ನೀರಿನ ತೀವ್ರ ಕೊರತೆ ಎದುರಾಗುತ್ತಿರುವುದರಿಂದ ನೀರು ವಿನಿಮಯದ ಬದಲಾಗಿ ಪರ್ಯಾಯ ಮಾರ್ಗಗಳ ಬಗ್ಗೆಯೂ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಕರ್ನಾಟಕದ ನಿಯೋಗವು ಅಧಿಕಾರಿಗಳಿಗೆ ತಿಳಿಸಿತು.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ನೇತೃತ್ವದ ನಿಯೋಗದಲ್ಲಿ ಜವಳಿ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮಹೇಶ್ ಕುಮಠಳ್ಳಿ, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಜಲಸಂಪನ್ಮೂಲ ಇಲಾಖೆಯ ಸಚಿವರ ವಿಶೇಷ ಕರ್ತವ್ಯಾಧಿಕಾರಿ ರುದ್ರಯ್ಯ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಲ್ಲಿಕಾರ್ಜುನ ಗುಂಗೆ ಉಪಸ್ಥಿತರಿದ್ದರು.

ಮಹಾರಾಷ್ಟ್ರದ ನೀರಾವರಿ ಸಚಿವರಾದ ಜಯಂತ್ ಪಾಟೀಲ ನೇತೃತ್ವದ ನಿಯೋಗದಲ್ಲಿ ಸಚಿವರಾದ ರಾಜೇಶ್ ಪಾಟೀಲ್ ಯಡ್ರಾವಕರ್, ಸತೇಜ್ ಪಾಟೀಲ್, ಬಾಳಾಸಾಹೇಬ್ ಪಾಟೀಲ್, ವಿಶ್ವಜಿತ್ ಕದಂ, ಸಂಸದರಾದ ಸಂಜಯ್ ಕಾಕಾ ಪಾಟೀಲ್, ಧೈರ್ಯಶೀಲ ಮಾನೆ, ಶಾಸಕರಾದ ಸಾವಂತ್, ರಾಜೇಶ್ ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *