ಬೆಳಗಾವಿ : ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿಗಳು ಸರಿಯಾಗಿ ಪೂರ್ಣಗೊಳ್ಳುತ್ತಿಲ್ಲ. ಎನ್ನುವ ಆರೋಪಗಳು ಕೇಳಿ ಬರುತ್ತಿವೆ ತಾಲೂಕಾ ಅಥವಾ ಜಿಲ್ಲಾ ಮಟ್ಟದ ಉಸ್ತುವಾರಿ ಕಮಿಟಿಯನ್ನು ಶೀಘ್ರವಾಗಿ ರಚನೆ ಮಾಡಲಾಗುವುದು ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಶನಿವಾರ ಸುವರ್ಣ ಸೌಧದಲ್ಲಿ ಬೆಳಗಾವಿ ವಿಭಾಗ ಮಟ್ಟದ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಒಳಚರಂಡಿ ವ್ಯವಸ್ಥೆಯನ್ನು ಸಂಬಂಧಿಸಿ ಇಲಾಖೆಯವರು ಅರ್ದ ಮರ್ದ ಮಾಡುತ್ತಿದ್ದಾರೆ ಎಂದು ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಸಿಎಂ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಉಸ್ತುವಾರಿ ಕಮಿಟಿಗಳನ್ನು ರಚನೆ ಮಾಡುವುದಾಗಿ ತಿಳಿಸಿದರು.
ಜಿಲ್ಲಾವಾರು ಟೆಂಡರ್ ಕರೆಯುವುದ್ದರಿಂದ ಬೆಂಗಳೂರು ಅಥವಾ ಇನ್ನಿತರ ಬೇರೆ ಭಾಗದ ಗುತ್ತಿಗೆದಾರರು ಗುತ್ತಿಗೆ ಪಡೆದುಕೊಂಡು ಮತ್ತೊಬ್ಬರಿಗೆ ತುಂಡು ಗುತ್ತಿಗೆ ನೀಡುತ್ತಿದ್ದಾರೆ. ನಗರೋತ್ಥಾನಯೋಜನೆಯ 2ನೇ ಹಂತ ಮೂರು ಸರಕಾರಗಳು ಬದಲಾಗಿ 6 ವರ್ಷ ಕಳೆದರು ಮುಗಿಯುತ್ತಿಲ್ಲ. ಎಸ್‍ಎಫ್‍ಸಿ ಅನುಧಾನದಂತೆ ನಗರೋತ್ಥಾನ ಅನುಧಾನವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು ಎಂದು ಅನೇಕ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಡಾಳಿತ ಇಲಾಖೆಯ ನಿರ್ದೇಶಕ ಕೆ.ಪಿ.ಮೋಹನರಾಜು, ನಗರೋತ್ಥಾನ ಯೋಜನೆಯಡಿ 647 ಕಾಮಗಾರಿಗಳಲ್ಲಿ ಶೇ 97 ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. 19 ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ ಎಂದರು.
ಶಾಸಕರಾದ ಮಹಾಂತೇಶ ಕೌಜಲಗಿ, ಮಹೇಶ ಕುಮಟೋಳಿ, ವಿಧಾನ ಪರಿಷತ್ ಸದಸ್ಯರಾದ ಆರ.ಬಿ.ತಿಮ್ಮಾಪೂರ, ವಿವೇಕರಾವ ಪಾಟೀಲ, ಮಹಾನಗರ ಪಾಲಿಕೆಯ ಮೇಯರ ಬಸಪ್ಪ ಚಿಕ್ಕಲದಿನ್ನಿ, ಉಪಮೇಯರ ಮಧುಶ್ರೀ ಪೂಜಾರಿ, ಜಿಲ್ಲಾಧಿಕಾರಿಗಳಾದ ಎಸ್. ಜಿಯಾವುಲ್ಲಾ, ಕೆ.ಜಿ.ಶಾಂತಾರಾಮ, ಎಸ್.ಬಿ.ಶೆಟ್ಟನ್ನವರ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.
ಅಂತಿಮ ತೀಮಾರ್ಣ ಶೀಘ್ರ
ಕೇಂದ್ರ ಸರಕಾರದ ಬೆಳಗಾವಿ ದಂಡು ಮಂಡಳಿಗೆ 2011-12 ನೇ ಸಾಲಿನ ವರೆಗೆ ಎಸ್‍ಎಫ್‍ಸಿ ಅನುಧಾನ ರಾಜ್ಯ ಸರಕಾರ ನೀಡುತ್ತ ಬಂದಿದೆ. ಅಲ್ಲಿನಿಂದ ಅನುಧಾನ ನೀಡುವುದನ್ನು ತಡೆ ಹಿಡಿಯಲಾಗಿದೆ. ದಂಡು ಮಂಡಳಿ ಪ್ರದೇಶದಲ್ಲಿ ಆರ್ಮಿಯ ಜನರೊಂದಿಗೆ ಸುಮಾರು 22 ಸಾವಿರ ಸಾರ್ವಜನಿಕರಿದ್ದಾರೆ ಅನುಧಾನ ನೀಡುವಂತೆ ಮಂಡಳಿಯ ಸಿಇಓ ದೀವ್ಯಾ ಶ್ರೀರಾಮನ್ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಪಿ.ಮೋಹನರಾಜ ಈ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ 15 ದಿನದೊಳಗೆ ಅಂತಿಮ ತೀಮಾರ್ಣ ಕೈಗೊಳ್ಳುವುದಾಗಿ ತಿಳಿಸಿದರು.
ಕನ್ನಡದಲ್ಲಿ ಮಾತನಾಡಿ
ಕೇಂದ್ರ ಸರಕಾರದ ವ್ಯಾಪ್ತಿಯ ದಂಡು ಮಂಡಳಿಯ ಸಿಇಓ ಸಭೆಯಲ್ಲಿ ಕನ್ನಡದಲ್ಲಿಯೇ ಮಾಹಿತಿ ನೀಡಿದರೆ. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಹೆಚ್ಚುವರಿ ಮುಖ್ಯ ಇಂಜನೀಯರ್ ವಿಶ್ವನಾಥ ಅವರು ನೀರು ಸರಬರಾಜು ಯೋಜನೆಯ ಬಗ್ಗೆ ಆಂಗ್ಲ ಭಾಷೆಯಲ್ಲಿ ಮಾಹಿತಿ ನೀಡುತ್ತಿದ್ದರೂ ಪೌರಾಡಳಿತ ಇಲಾಖೆಯ ನಿರ್ದೇಶಕ ಕೆ.ಪಿ.ಮೋಹನರಾಜು ಪದೇ ಪದೇ ಕನ್ನಡದಲ್ಲಿ ಮಾತನಾಡಿ ಸಭೆಯಲ್ಲಿ ಭಾಗವಹಿಸಿದ್ದವರಿಗೆ ತಿಳಿಯಲಿ ಎನ್ನುವ ಸೂಚನೆ ನೀಡುತ್ತಿರುವ ಶಬ್ದ ಕೇಳಿ ಬಂದವು.
5 ಸಾವಿರ ಮತ ಕಡಿಮೆ
ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪೂರ 2011ರಲ್ಲಿ 40 ಕೋಟಿ 83 ಲಕ್ಷಗಳ ಹಣದಲ್ಲಿ ಮುಧೋಳ ನಗರದಲ್ಲಿ ನಡೆಯುತ್ತಿರುವ ಒಳ ಚಂರಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅವುಗಳ ಮೇಲುಸ್ತುವಾರಿಗೆ ಕಮಿಟಿ ರಚನೆ ಮಾಡಲು ಕ್ರಮ ಕೈಗೊಳ್ಳಿ ಸಚಿವರೆ ಎಂದಾಗ ಸಚಿವ ರಮೇಶ ಜಾರಕಿಹೊಳಿ ಗೋಕಾಕ ನಗರದಲ್ಲಿ ನಡೆಯುತ್ತಿರುವ ಯುಜಿಡಿ ಯೋಜನೆಯಿಂದ ಇತ್ತಿಚಿನ ಚುನಾವಣೆಯಲ್ಲಿ 5 ಸಾವಿರ ಕಡಿಮೆ ಮತಗಳು ಬಿದ್ದಿವೆ ಎಂದಾಗ ಸಭೆಯಲ್ಲಿ ಭಾಗವಹಿಸಿದ್ದರು ಒಂದು ಕ್ಷಣ ನಗೆಗಿಡಾದ ಪ್ರಸಂಗ ನಡೆಯಿತು.