ಬೆಳಗಾವಿ: ಮಹಾನಗರ ಪಾಲಿಕೆಗೆ ಬಂದ ಮುಖ್ಯಮಂತ್ರಿಗಳ ವಿಶೇಷ ನೂರು ಕೋಟಿ ರೂ. ಅನುದಾನ ಕಾಮಗಾರಿಗೆ ಶಿಷ್ಟಾಚಾರ ಉಲ್ಲಂಘಿಸಿರುವ ಪಾಲಿಕೆ ಆಯುಕ್ತರ ವಿರುದ್ಧ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಾಮಗಾರಿಗೆ ಚಾಲನೆ ನೀಡಿದ ಪ್ರದೇಶದ ಶಾಸಕರನ್ನೇ ಆಹ್ವಾನಿಸದೇ ಸಚಿವ ರಮೇಶ ಜಾರಕಿಹೊಳಿ ಹಾಗೂ ಪಾಲಿಕೆ ಆಯುಕ್ತ ಶಶಿಧರ ಕುರೇರ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಕಾಂಗ್ರೆಸ್ ಏಜೆಂಟ್‍ರಂತೆ ವರ್ತಿಸುತ್ತಿರುವ ಆಯುಕ್ತರು ಶಾಸಕರನ್ನು ಮರೆತಿದ್ದು ಏಕೆ. ತಾರತಮ್ಯ ನೀತಿ ಅನುಸರಿಸುತ್ತಿರುವ ಆಯುಕ್ತರ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ನೀಡಿರುವ ಅನುದಾನವನ್ನು ತಾವು ಮಂಜೂರು ಮಾಡಿಸಿರುವುದಾಗಿ ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅನುದಾನ ಮಂಜೂರು ಮಾಡಿಸಿಕೊಂಡು ಬರಲು ಹೆಬ್ಬಾಳಕರ ಯಾರು ಎಂದು ಪ್ರಶ್ನಿಸಿದರು.
ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಗುಡುಗಿದ ಶಾಸಕ ಸಂಜಯ, ಸರಕಾರಿ ಕೆಲಸಕ್ಕೆ ಸಚಿವರು ಯಾರನ್ನೂ ಆಹ್ವಾನಿಸುತ್ತಿಲ್ಲ. ಶಾಸಕರನ್ನು ಕರೆ ಮಾಡಿ ಆಹ್ವಾನಿಸಬೇಕಿತ್ತು. ಆದರೆ ತಮಗೆ ಬೇಕಾದವರನ್ನು ಮಾತ್ರ ಕರೆದು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈ ಮುಂಚೆ ಸತೀಶ ಜಾರಕಿಹೊಳಿ ಸಚಿವರಾಗಿದ್ದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದರು. ಆದರೆ ಈಗ ರಮೇಶ ಜಾರಕಿಹೊಳಿ ತಮಗೆ ಮನಬಂದತೆ ಅ„ಕಾರ ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಪಾಲಿಕೆ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಪಾಲಿಕೆ ಆಯುಕ್ತ ಕುರೇರ ಬರುವಂತೆ ಪಟ್ಟು ಹಿಡಿದರು. ನಂತರ ಫೆಓನ್ನಲ್ಲಿ ಮಾತನಾಡಿದ ಅವರು, ಶಾಸಕರನ್ನು ಸಮಾಧಾನಪಡಿಸಿ ಪ್ರತಿಭಟನೆ ಹಿಂಪಡೆಯುವಂತೆ ಕೋರಿದರು.
ಶಾಸಕ ಸಂಜಯ ಪಾಟೀಲ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಕಿಡಿಕಾರಿದರು