Breaking News

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ* – ಸಚಿವ ರಮೇಶ್ ಜಾರಕಿಹೊಳಿ‌.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಯಾವುದೇ ಪ್ರದೇಶಕ್ಕೂ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಜಲಸಂಪನ್ಮೂಲ ಸಚಿವ *ರಮೇಶ್ ಜಾರಕಿಹೊಳಿ* ತಿಳಿಸಿದರು.  ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಜಲಸಂಪನ್ಮೂಲ ಇಲಾಖೆಯ ಸಿವಿಲ್ ಇಂಜಿನಿಯರಿಂಗ್ ಸಂಘದ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿದೆ.

ಎಲ್ಲ ಜಲಾಶಯಗಳಲ್ಲೂ ಸಾಕಷ್ಟು ನೀರಿದೆ. ಆ ನೀರನ್ನು ಕಾಪಾಡಿಕೊಂಡು ಸರಿಯಾಗಿ ನಿರ್ವಹಣೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ರವಾನಿಸಲಾಗಿದೆ ಎಂದರು.
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಕಾವೇರಿ ಪಾತ್ರದಿಂದ ನೀರು ಪಡೆಯುವ, ಬೆಂಗಳೂರು ಸೇರಿದಂತೆ ಬೇರೆ ಯಾವುದೇ ನಗರಪ್ರದೇಶಗಳು ಜಲಾಶಯ ಮೂಲದಿಂದ ನೀರು ಪಡೆಯುತ್ತಿದ್ದರೆ ಆತಂಕ ಪಡೆಯುವ ಅಗತ್ಯವಿಲ್ಲ ಎಂದು ಸಚಿವ ಜಾರಕಿಹೊಳಿ‌ ಹೇಳಿದರು.
ನೀರು ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಖುದ್ದಾಗಿ ಆಸಕ್ತಿ ವಹಿಸಿ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದರು. ಕಾವೇರಿ ನದಿ ಪ್ರಾಧಿಕಾರದ ಸೂಚನೆ ಅನುಸಾರ ತಮಿಳುನಾಡಿಗೆ ಅಗತ್ಯವಿದಷ್ಟು ನೀರು ಬಿಟ್ಟು ಆನಂತರವೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವರು ತಿಳಿಸಿದರು.
ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ತಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಪ್ರತಿಯೊಂದು ಜಲಾಶಯಗಳಿಗೂ ಭೇಟಿ ನೀಡಿ ಒಂದು ವಾರ ಪೂರ್ತಿ ಅಲ್ಲಿಯೇ ತಂಗಿ ಪರಿಶೀಲನೆ ನಡೆಸುತ್ತೇನೆ. ಅಧಿಕಾರಿಗಳ ಸಭೆಗಳನ್ನು ನಡೆಸುತ್ತೇನೆ. ಸ್ಥಳೀಯವಾಗಿ ಕೈಗೊಳ್ಳಬೇಕಾಗಿರುವ ಕೆಲಸಗಳು, ನಿರ್ಧಾರಗಳ ಬಗ್ಗೆ ಆಯಾ ಭಾಗದಲ್ಲಿ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆಯಾದ ಕೆಆರ್ ಎಸ್ ಬಳಿ ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣದ ಪ್ರಸ್ತಾವನೆಯನ್ನು ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಅದು ಕಾರ್ಯಸಾಧ್ಯವಾಗಿದ್ದರೆ ಮುಂದುವರೆಸುತ್ತೇವೆ. ಇಲ್ಲವಾದರೆ ಇಲ್ಲ. ಯೋಜನೆಗಳ ವಿಷಯದಲ್ಲಿ ವೈಯಕ್ತಿಕವಾಗಿ ಯಾರ ಹೆಸರೂ ತಳಕು ಹಾಕುವುದು ಸರಿಯಲ್ಲ. ಅದು ಸರ್ಕಾರದ ಪ್ರಸ್ತಾವಿತ ಯೋಜನೆ. ಹಾಗಾಗಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವರು ಹೇಳಿದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *