ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು ತವರು ಕ್ಷೇತ್ರವಾದ ಗೋಕಾಕ ಮತ್ತು ಅರಬಾವಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ, ಪುತ್ರ ರಾಹುಲ್ ಈಗಾಗಲೇ ಗೋಕಾಕ ಮತ್ತು ಅರಬಾವಿಯಲ್ಲಿ ಪ್ರಚಾರ ನಡೆಸಿದ್ದು, ಈಗ ಸತೀಶ ಜಾರಕಿಹೊಳಿ ಅವರು ಗೋಕಾಕ ಮತ್ತು ಅರಬಾವಿ ಕ್ಷೇತ್ರಗಳ ಸಂಚಾರ ಮಾಡಿದ್ದು, ಈ ಎರಡು ಕ್ಷೇತ್ರದಲ್ಲಿ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ.
ಸತೀಶ ಜಾರಕಿಹೊಳಿ ಅವರು ಗೋಕಾಕ ಮತ್ತುಅರಬಾವಿ ಕ್ಷೇತ್ರಗಳಲ್ಲಿರುವ ಪ್ರತಿಯೊಂದು ಗ್ರಾಮಕ್ಕೆ ತೆರಳಿ ಮತಯಾಚಿಸುತ್ತಿದ್ದು, ಸತೀಶ ಜಾರಕಿಹೊಳಿ ಅವರನ್ನು ಕ್ಷೇತ್ರದ ಜನ ಆರತಿ ಬೆಳಗಿ ಸ್ವಾಗತ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಕಾಂಗ್ರೆಸ್ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ, ಶಾಸಕಿ ಅಂಜಲಿ ನಿಂಬಾಳ್ಕರ್, ವೀಣಾ ಕಾಶಪ್ಪನವರ ಸೇರಿದಂತೆ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಕ್ಷೇತ್ರದಲ್ಲಿ ಸಂಚರಿಸಿ ಮತಯಾಚಿಸುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಬೆಳಗಾವಿಯಲ್ಲಿಯೇ ಇದ್ದುಕೊಂಡು ರೈತ ನಾಯಕ ಬಾಬಾಗೌಡಾ ಪಾಟೀಲ, ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಸೇರಿದಂತೆ ಜಾತ್ಯಾತೀತ ಸಿದ್ದಾಂತ ಹೊಂದಿರುವ ನಾಯಕರನ್ನು ಮತ್ತು ವಿವಿಧ ಸಂಘಟನೆಗಳ ಮುಖಂಡರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ನಾಳೆ ಸವದತ್ತಿ ತಾಲೂಕಿನಲ್ಲಿ ಸತೀಶ ಜಾರಕಿಹೊಳಿ ಅವರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಕಾಂಗ್ರೆಸ್ ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ.