Breaking News

ಕಾಮಗಾರಿ ವಿಳಂಬ-ಗುತ್ತಿಗೆದಾರರ ವಿರುದ್ಧ ಕ್ರಮ:

ಬೆಳಗಾವಿ,: ಮಲಪ್ರಭಾ ಯೋಜನಾ ವಲಯದಲ್ಲಿ ಚಾಲ್ತಿಯಲ್ಲಿ ಇರುವ ವಿವಿಧ ಕಾಮಗಾರಿಗಳು, ದುರಸ್ತಿ ಮತ್ತು ವಸತಿಗೃಹಗಳ ನವೀಕರಣಕ್ಕೆ ಸಾವಿರಾರು ಕೋಟಿ ರೂಪಾಯಿ ಅಗತ್ಯವಿದೆ. ಆದ್ದರಿಂದ ಈ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯದ ಬಳಿಯ ಮಲಪ್ರಭಾ ಯೋಜನಾ ವಲಯದ ಅಧೀಕ್ಷಕ ಎಂಜಿನಿಯರ್ ಕಚೇರಿಯಲ್ಲಿ ಮಂಗಳವಾರ (ಮೇ 19) ನಡೆದ ಮಲಪ್ರಭಾ ಯೋಜನಾ ವಲಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಶಾಸಕರು ಶಿಫಾರಸ್ಸು ಮಾಡಿರುವ ಎಲ್ಲ ನೀರಾವರಿ ಯೋಜನೆ, ದುರಸ್ತಿ ಕೆಲಸ ಮತ್ತು ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಮಲಪ್ರಭಾ ಆಧುನೀಕರಣ ಯೋಜನೆ, ಕೆರೆಗೆ ನೀರು ತುಂಬುವ ಕಾಮಗಾರಿ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ಅವರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ಪಾವತಿಸಲು ಅನುಕೂಲವಾಗುವಂತೆ ಪ್ರತಿವರ್ಷದ ಅನುದಾನದಲ್ಲಿ ನಿರ್ದಿಷ್ಟ ಮೊತ್ತವನ್ನು ಮೀಸಲಿಡಲಾಗುವುದು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಕಾಮಗಾರಿ ವಿಳಂಬ-ಗುತ್ತಿಗೆದಾರರ ವಿರುದ್ಧ ಕ್ರಮ:

ಕಾಮಗಾರಿಯನ್ನು ವಿಳಂಬಗೊಳಿಸುವ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಸಚಿವ ಜಾರಕಿಹೊಳಿ ಸೂಚನೆ ನೀಡಿದರು.
ನೋಟಿಸ್ ನೀಡಿದಾಗ್ಯೂ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಭೂಸ್ವಾಧೀನ ಪ್ರಕರಣಗಳು ಹೊರತುಪಡಿಸಿ ಅವಶ್ಯಕವಾಗಿ ಕಾಮಗಾರಿ ವಿಳಂಬಗೊಳಿಸುವ ಗುತ್ತಿಗೆದಾರರ ಧೋರಣೆಯನ್ನು ಸಹಿಸುವುದಿಲ್ಲ.
ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳುವುದರ ಜತೆಗೆ ತಾಂತ್ರಿಕ ಕಾರಣಗಳಿಂದ ಯಾವುದೇ ಯೋಜನೆ ಕುಂಠಿತಗೊಳ್ಳದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ರೈತರ ಪಾಲುದಾರಿಕೆಯೊಂದಿಗೆ ನೀರು ಸದ್ಬಳಕೆಗೆ ವಾಲ್ಮಿ ವತಿಯಿಂದ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದರು.
ರಾಜಸ್ತಾನ ಮತ್ತು ಮಹಾರಾಷ್ಟ್ರದ ಮಾದರಿಯಲ್ಲಿ ರೈತರ ಸಹಭಾಗಿತ್ವದಲ್ಲಿ ನೀರಾವರಿ ವ್ಯವಸ್ಥೆ ಅನುಷ್ಠಾನದ ಬಗ್ಗೆ ಅಧ್ಯಯನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕೆರೆಗೆ ನೀರು ತುಂಬುವ ಯೋಜನೆಯ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು.

ವಿವಿಧ ಮತಕ್ಷೇತ್ರಗಳ ಶಾಸಕರ ಬೇಡಿಕೆಗಳನ್ನು ಆಲಿಸಿದ ಸಚಿವ ರಮೇಶ್ ಜಾರಕಿಹೊಳಿ ಅವರು, ಕೇಂದ್ರ ಜಲ ಆಯೋಗದಿಂದ ಅನುಮತಿ ಲಭಿಸಿದ ಎಲ್ಲ ಹೊಸ ಯೋಜನೆಗಳನ್ನು ಕೂಡಲೇ ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು.

ಕರ್ನಾಟಕ ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ ಮಾತನಾಡಿ, ಯಾತ ನೀರಾವರಿ ಯೋಜನಾ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಏತ ನೀರಾವರಿ ಯೋಜನೆ ಮತ್ತು ಕೆರೆ ತುಂಬುವ ಯೋಜನೆಗಳ ಪ್ರಸ್ತಾಪಿಸಿದ ಶಾಸಕ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡ್ರ ಮತ್ತು ಮಹಾದೇವಪ್ಪ ಯಾದವಾಡ ಅವರು ಅನೇಕ ವರ್ಷಗಳಿಂದ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಚಿವರಿಗೆ ಮನವಿ ಮಾಡಿಕೊಂಡರು.

ಧಾರವಾಡ ಜಿಲ್ಲೆಯ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರದಲ್ಲೇ ಬೆಣ್ಣೆ ಹಳ್ಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.

ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದಿಂದ ಸುಮಾರು 14 ಟಿಎಂಸಿ ನೀರು ಲಭಿಸಲಿದೆ. ಸೂಕ್ತ ಯೋಜನೆ ರೂಪಿಸುವ ಮೂಲಕ ಜನರಿಗೆ ಅನುಕೂಲ ಆಗುವಂತೆ ಮಾಡಬೇಕು ಮುನೇನಕೊಪ್ಪ ಮನವಿ ಮಾಡಿಕೊಂಡರು.

ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅವರು ಮಲಪ್ರಭಾ ಯೋಜನೆಯ ಅನುಷ್ಠಾನದ ಕುರಿತು ಮಾತನಾಡಿದರು.
ಸುಮಾರು 3500 ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ. ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಮಂಜುನಾಥ ಗುಂಗೆ ವಿವರಿಸಿದರು.
ವಿವಿಧ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಉಳಿದುಕೊಂಡಿರುವ ಲಭ್ಯವಿರುವ ಅನುದಾನದಡಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಲಪ್ರಭಾ ಯೋಜನೆಯ ಮುಖ್ಯ ಎಂಜಿನಿಯರ್ ವಿ.ಕೆ.ಪೊದ್ದಾರ, ಮಲಪ್ರಭಾ 1.96 ಲಕ್ಷ ಹೆಕ್ಟೇರ್ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಜಲಾಶಯದ ಉಪಯೋಗಿಸಲ್ಪಡುವ ನೀರಿನ ಸಂಗ್ರಹಣಾ ಸಾಮರ್ಥ್ಯ 33.34 ಟಿಎಂಸಿ ಇರುತ್ತದೆ ಎಂದು ತಿಳಿಸಿದರು.
ಜಲಾಶಯ ನಿರ್ಮಾಣ ಆದ 1972 ರಿಂದ 73 ರಿಂದ ಇಲ್ಲಿಯವರೆಗೆ ಐದು‌ ಬಾರಿ ಮಾತ್ರ ಭರ್ತಿಯಾಗಿದೆ ಎಂದರು.
ಮಲಪ್ರಭಾ ಯೋಜನಾ ವಲಯದಲ್ಲಿ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳು, ಪ್ರಗತಿಯನ್ನು ವಿವರಿಸಿದರು ಇದಲ್ಲದೇ ಅಧಿಕಾರಿ ಮತ್ತು ಸಿಬ್ಬಂದಿ ಮಾಹಿತಿಯನ್ನು ನೀಡಿದರು.

ಯೋಜನಾ ವಲಯದ ವ್ಯಾಪ್ತಿಯಲ್ಲಿ ಬರುವ ಬೈಲಹೊಂಗಲ, ರಾಮದುರ್ಗ, ಸವದತ್ತಿ ಸೇರಿದಂತೆ ವಿವಿಧ ವಿಧಾನಸಭಾ ಮತಕ್ಷೇತ್ರಗಳ ಶಾಸಕರ ಬೇಡಿಕೆಯ ಮೇರೆಗೆ ಕೈಗೊಳ್ಳಲಾದ ವಿವಿಧ ಯೋಜನೆ ಮತ್ತು ಕಾಮಗಾರಿಗಳ ಪ್ರಗತಿಯನ್ನು ಮಲಪ್ರಭಾ ಯೋಜನೆಯ ಮುಖ್ಯ ಎಂಜಿನಿಯರ್ ವಿ.ಕೆ.ಪೊದ್ದಾರ ಅವರು ಸಚಿವರಿಗೆ ವಿವರಿಸಿದರು.
ಮಲಪ್ರಭಾ ಯೋಜನಾ ವಲಯದ ಪ್ರಮುಖ ಯೋಜನೆಯಾದ ಶಿಗ್ಗಾಂವಿ ಏತ ನೀರಾವರಿ ಯೋಜನೆಯು ಮುಕ್ತಾಯ ಹಂತದಲ್ಲಿದೆ. 39 ಕೆರೆ ತುಂಬುವ ಯೋಜನೆಯು ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಮಲಪ್ರಭಾ ಯೋಜನಾ ವಲಯದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
****

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *