ಮೆಥೋಡಿಸ್ಟ್ ಚರ್ಚ್ ಬಳಿ ಇರುವ ಕುಲಕರ್ಣಿ ಜಾಗಕ್ಕೆ ಸಂಬಂಧಿಸಿದಂತೆ ತನ್ನ ಪರವಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ನೀಡಿರುವ ತೀರ್ಪಿನಿಂದ ಉತ್ತೇಜಿತಗೊಂಡಿರುವ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ, ಧೈರ್ಯ ಇದ್ದರೆ ಜಿಲ್ಲಾಡಳಿತ ಮತ್ತು ತಂತ್ರಗಾರಿಕೆ ರೂಪಿಸುತ್ತಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ ಕೆಎಟಿ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅಪೀಲು ಸಲ್ಲಿಸಿದರೂ ಕೂಡ ನನ್ನದೇ ಗೆಲುವು. ಬೇಕಿದ್ದರೆ ಜಿಲ್ಲಾಡಳಿತ ಈ ನನ್ನ ಸವಾಲು ಸ್ವೀಕರಿಸಿ ಮುಂದುವರಿಯಬಹುದು ಎಂದಿದ್ದಾರೆ.ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುನವಳ್ಳಿ, ರಾಜಕೀಯ ಶಕ್ತಿಗಳ ಕೈಗೊಂಬೆಯಾಗಿರುವ ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿ ಎನ್. ಜಯರಾಮ್ ತಮಗೆ ಸರಿಕಂಡಂತೆ ಆದೇಶ ಹೊರಡಿಸಿ ಕುಲಕರ್ಣಿ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಕಬಳಿಸಲು ಹೊಂಚು ಹಾಕಿದ್ದರು. ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತದ ಎಲ್ಲ ಆದೇಶಗಳನ್ನು ಬದಿಗೊತ್ತಿರುವ ನ್ಯಾಯಮಂಡಳಿ ನ್ಯಾಯದ ಪರವಾಗಿ ತೀರ್ಪು ನೀಡಿದೆ. ಇಲ್ಲಿಯವರೆಗೆ ನಾನು ಸೇರಿದಂತೆ ಕುಲಕರ್ಣಿ ಕುಟುಂಬ ಮತ್ತು ನಗರದ ಹೃದಯ ಭಾಗದಲ್ಲಿರುವ ಜಮೀನು ಖರೀದಿಸಿದ ಡಮ್ಮಣಗಿ ಡವಲಪರ್ಸ್ ಗೆ ಆರ್ಧಿಕವಾಗಿ ಆಪಾರ ಹಾನಿಯಾಗಿದೆ.
ಏತನ್ಮಧ್ಯೆ ಒಂದು ವೇಳೆ ಜಿಲ್ಲಾಡಳಿತ ಉಚ್ಚ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದಲ್ಲಿ, 100 ಕೋಟಿ ರೂ.ಪರಿಹಾರ ನಷ್ಟ ಕೋರಿ ಮರುಮೊಕದ್ದಮೆ ದಾಖಲಿಸುತ್ತೇನೆ.
ಮಾಜಿ ಸಚಿವ ಸತೀಶ ಜಾರಕಿಹೊಳಿ ಮತ್ತು ಜಿಲ್ಲಾಧಿಕಾರಿ ವಿರುದ್ಧ ತಿರುಗಿ ಬಿದ್ದ ಮುನವಳ್ಳಿ, ಖಾಸಗಿ ಆಸ್ತಿಯನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ತಮಗೆ ಸರಿ ಕಾಣುತ್ತದೋ ಆ ರೀತಿ ತಿರುಚಿದ್ದಾರೆ. ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ನೀಡಿದ ತಪ್ಪು ಮಾಹಿತಿಯಿಂದಾಗಿ ಹಿರಿಯ ಕಾಂಗ್ರೆಸ್ಸಿಗ ಮತ್ತು ಸಚಿವ ಕಾಗೋಡು ತಿಮ್ಮಪ್ಪ ಅವರು ಸದನದಲ್ಲಿ ಪ್ರಶ್ನೆಯೊಂದಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಸದನಕ್ಕೆ ತಪ್ಪು ಮಾಹಿತಿ ನೀಡಲು ಕಾರಣರಾದ ವ್ಯಕ್ತಿ, ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆಶಯದ ಸಂಗತಿ ಏನೆಂದರೆ ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಸಮಿತಿ ರಚಿಸುವ ಪ್ರಕ್ರಿಯೆ ಆರಂಭಿಸಿದೆ ಎಂದು ಹೇಳಿದರು.
ಮೆಥೋಡಿಸ್ಟ್ ಚರ್ಚ್ ಗೆ ಹೊಂದಿಕೊಂಡಂತೆ ಇರುವ ಜಮೀನಿನ ಕುರಿತು ಮಾಜಿ ಸಚಿವ ಸತೀಶ ಜಾರಕಿಹೊಳಿ ಪ್ರಶ್ನೆಯೊಂದನ್ನು ಕೇಳಿದ್ದರು. ಆ ಪ್ರಶ್ನೆಗೆ ಉತ್ತರ ನೀಡಬೇಕಾಗಿದ್ದ ಕಾಗೋಡು ತಿಮ್ಮಪ್ಪ ಅವರು ಬೆಳಗಾವಿ ಜಿಲ್ಲಾಧಿಕಾರಿಗಳಿಂದ ಅಗತ್ಯ ಮಾಹಿತಿ ತರಿಸಿಕೊಂಡಿದ್ದರು. ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ನೀಡಿದ ಮಾಹಿತಿ ಸುಳ್ಳು ಇದ್ದು, ಈ ಮಾಹಿತಿಯನ್ನೇ ಸಚಿವ ಕಾಗೋಡು ತಿಮ್ಮಪ್ಪ ಸದನಕ್ಕೆ ನೀಡಿದ್ದಾರೆ. ಸದನಕ್ಕೆ ತಪ್ಪು ಮಾಹಿತಿ ನೀಡಿದವರ ವಿರುದ್ಧ ಹೋರಾಟ ಮಾಡಬೇಕಿದ್ದ ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್, ಕುಮಾರ ಸ್ವಾಮಿ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.