Breaking News

ನಿರಾಶ್ರಿತರ ನೆರವಿಗೆ ದಾನಿಗಳಿಂದ ಅಗತ್ಯ ಸಾಮಗ್ರಿ ಸಂಗ್ರಹ

ಬೆಳಗಾವಿ,-: ಜಿಲ್ಲಾಡಳಿತ ವತಿಯಿಂದ ಕೋವಿಡ್-೧೯ರ ಹಿನ್ನೆಲೆಯಲ್ಲಿ ಜಿಲ್ಲೆಯ ಕೂಲಿಕಾರ್ಮಿಕರು ಮತ್ತು ನಿರಾಶ್ರಿತರಿಗಾಗಿ ಅಗತ್ಯ ದಿನಸಿ ಪದಾರ್ಥಗಳನ್ನು ಮತ್ತು ವೈದ್ಯಕೀಯ ವಸ್ತುಗಳನ್ನು ದಾನಿಗಳಿಂದ ಸ್ವೀಕರಿಸಲು ಮತ್ತು ಅರ್ಹರಿಗೆ ವಿತರಿಸುವ ನಿಟ್ಟಿನಲ್ಲಿ ವ್ಯಕ್ತಿಗಳು ಮತ್ತು ಸ್ವಯಂ-ಸಂಸ್ಥೆಗಳ ನೋಂದಣಿ ಗಾಗಿ ಜಿಲ್ಲಾ ವೆಬ್‌ಸೈಟ್‌ನಲ್ಲಿ ಒಂದು ವೇದಿಕೆಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಸಮನ್ವಯ ಸಮಿತಿಯ ಸಂಚಾಲಕರಾಗಿರುವ ಶಶಿಧರ ಕುರೇರ್ ತಿಳಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಸಭಾಭವನದಲ್ಲಿ ಸೋಮವಾರ(ಏ.೬) ನಡೆದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೊವಿಡ್-೧೯ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಎನ್.ಜಿ.ಓ. ಸ್ವಯಂ-ಸಂಸ್ಥೆಗಳ ಸಹಯೋಗದೊಂದಿಗೆ ಜನರಲ್ಲಿ ಕೊವಿಡ್-೧೯ ಕುರಿತು ಜಾಗೃತಿ ಮೂಡಿಸುವುದು, ವಲಸೆ ಬಂದಂತಹ ಕೂಲಿ ಕಾರ್ಮಿಕರು ಮತ್ತು ನಿರಾಶ್ರಿತರಿಗೆ ದಿನನಿತ್ಯದ ಅವಶ್ಯಕ ಆಹಾರ ಪದಾರ್ಥಗಳನ್ನು, ಮಾಸ್ಕ್, ಸ್ಯಾನಿಟರೈಸರ್ ಮುಂತಾದವುಗಳನ್ನು ಉಚಿತವಾಗಿ ಒದಗಿಸಲು ಸ್ವಯಂ-ಪ್ರೇರಿತರಾಗಿ ಮುಂದೆ ಬಂದು ಜಿಲ್ಲಾಡಳಿತದೊಂದಿಗೆ ಸಹಾಯ ಹಸ್ತ ನೀಡುವ ವ್ಯಕ್ತಿಗಳು, ಸಂಘ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವುದು ಸಮಿತಿಯ ಕೆಲಸವಾಗಿದೆ.

ಜಿಲ್ಲೆಯ ಎಲ್ಲಾ ಆಸಕ್ತವುಳ್ಳ ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕ ಸೇವಾ ಸಂಸ್ಥೆಗಳು, ಸಹಕಾರ ಗುಂಪುಗಳು, ವ್ಯಕ್ತಿಗಳು ಮತ್ತು ಮದ್ಯಸ್ಥಗಾರರು ಸೇರಿದಂತೆ ಜಿಲ್ಲಾಡಳಿತದೊಂದಿಗೆ ಸಹಾಯ ಹಸ್ತ ನೀಡಲು ಕೊವಿಡ್-೧೯ ವೇದಿಕೆಯಲ್ಲಿ ನೊಂದಣಿ ಮಾಡಬಹುದಾಗಿದೆ.

ನೊಂದಣಿಗಾಗಿ ವೆಬ್ ವಿಳಾಸ:
belagavi.nic.in
link:https://belagavi.nic.in/en/covid-19-registration-of-volunteers/

ಅಗತ್ಯ ಸೇವೆ ಮತ್ತು ವಸ್ತುಗಳನ್ನು ಪೂರೈಸಲು ಆಸಕ್ತಿಯುಳ್ಳ ದಾನಿಗಳು ಸಹ ನೊಂದಾಯಿಸಬಹುದಾಗಿದೆ. ಅಗತ್ಯ ವಸ್ತುಗಳ ಪೂರೈಕೆಗಾಗಿ, ಅಗತ್ಯತೆ ಮತ್ತು ವಸ್ತುಗಳ ಅವಶ್ಯಕತೆ ಇರುವ ಜನರು ಈ ಅಂಕಣದ ಮೂಲಕ ತಮ್ಮ ಬೇಡಿಕೆಗಳನ್ನು ಹಂಚಿಕೊಳ್ಳಬಹುದಾಗಿದೆ.
ಸದರಿ ವೆಬ್‌ಸೈಟ್‌ನಲ್ಲಿ ಪ್ರಾರಂಭಿಸಲಾಗಿರುವ ವೇದಿಕೆಯಲ್ಲಿ ಸರ್ಕಾರೇತರ ಸಂಘ- ಸಂಸ್ಥೆಗಳಿಂದ ಒದಗಿಸಲಾದ ಪರಿಹಾರ ಮತ್ತು ನೀಡಿರುವ ಸಹಕಾರದ ಕುರಿತು ಅಂಕಿ ಅಂಶಗಳ ಸಮೇತ ಜಿಲ್ಲಾ ವೆಬ್‌ಸೈಟ್ ನಲ್ಲಿ ಅಪ್‌ಡೇಟ್ ಮಾಡಲಾಗುವುದು.

ಜಿಲ್ಲಾಡಳಿತದಿಂದ ನೇಮಿಸಲಾಗಿರುವ ಜಿಲ್ಲಾ ಸಮಿತಿಯ ನಗರ ಪ್ರದೇಶದ ಅಧಿಕಾರಿಗಳು, ತಾಲೂಕು ಮಟ್ಟದಲ್ಲಿ ತಹಸೀಲ್ದಾರರು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸ್ವಯಂ-ಸೇವಕರ ಮುಖಾಂತರ ಅಗತ್ಯವಿರುವ ಜನರಿಗೆ ಅವಶ್ಯಕ ವಸ್ತುಗಳನ್ನು ಪೂರೈಸಲಾಗುವುದು ಎಂದು ಸಮಿತಿಯ ಸಂಚಾಲಕ ಶಶಿಧರ್ ಕುರೇರ್ ತಿಳಿಸಿದ್ದಾರೆ.

ಸರ್ಕಾರೇತರ ಮದ್ಯಸ್ಥಗಾರರು ಜನರ ಅವಶ್ಯಕತೆಗಳನ್ನು ಪತ್ತೆ ಹಚ್ಚುವುದು ಮತ್ತು ಸಾರ್ವಜನಿಕರ ಆರೋಗ್ಯದ ಸ್ಥಿರತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಪೂರೈಸುವುದು. ಇದಕ್ಕೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಹಾಯವಾಣಿ ಸಂಖ್ಯೆ: ೦೮೩೧-೨೪೨೪೨೮೪ ಗೆ ಸಂಪರ್ಕಿಸುವುದು.

ಸಮಿತಿಯ ಸದಸ್ಯರು, ರೆಡ್ ಸಂಸ್ಥೆಯ ಪದಾಧಿಕಾರಿಗಳು, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
****

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *