ಬೆಳಗಾವಿ:ಕಾಲು ಕೆದರಿ ಜಗಳ ತೆಗೆಯೋದು ಶಿವಸೇನೆಯ ಹುಟ್ಟುಗುಣ,ಮನಗುತ್ತಿಯ ಹಿರಿಯರು ಕೂಡಿಕೊಂಡು ಶಿವಾಜಿ ಮೂರ್ತಿಯ ವಿವಾದವನ್ನು ಅತ್ಯಂತ ಸೌಹಾರ್ದಯುತವಾಗಿ ಬಗೆಹರಿಸಿಕೊಂಡರೂ ಶಿವಸೇನೆಗೆ ಇದನ್ನು ಸಹಿಸಲು ಸಾದ್ಯವಾಗುತ್ತಿಲ್ಲ,ಕೊಲ್ಹಾಪುರ ಶಿವಸೇನೆಯ ಪ್ರಮುಖರು ಇಂದು ಕರ್ನಾಟಕದ ಗಡಿಯೊಳಗೆ ನುಗ್ಗಿ ಮತ್ತೆ ಕ್ಯಾತೆ ತೆಗೆದು,ತೆರವು ಗೊಳಿಸಿದ ಸ್ಥಳದಲ್ಲೇ ಶಿವಾಜಿ ಮೂರ್ತಿ ಮುರು ಪ್ರತಿಷ್ಠಾಪನೆ ಮಾಡಬೇಕೆಂದು ಪುಂಡಾಟಿಕೆ ಪ್ರದರ್ಶಿಸಿದ್ದಾರೆ
ಇತ್ತೀಚಿಗೆ ರಾಜ್ಯಾದ್ಯಂತ ಗಮನ ಸೆಳೆದು, ತಣ್ಣಗಾಗಿದ್ದ ಮನಗುತ್ತಿ ಗ್ರಾಮದಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ವಿಚಾರ ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟಿಕೆ ಮುಂದುವರೆಸಿದೆ.
ತೆರವುಗೊಳಿಸಿದ ಸ್ಥಳದಲ್ಲಿಯೇ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪಿಸುವಂತೆ ಕೊಲ್ಹಾಪುರದ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ ದೇವನ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಶಿವ ಸೈನಿಕರು ಪ್ರತಿಭಟನೆ ಆಗಮಿಸಿದ್ದರು. ಆದ್ರೆ ತಕ್ಷಣ ಎಚ್ಚೆತ್ತ ಪೊಲೀಸರು, ಶಿವಸೇನೆ ಕಾರ್ಯಕರ್ತರಿಗೆ ಮನಗುತ್ತಿ ಗ್ರಾಮದಲ್ಲಿ ಪ್ರವೇಶ ನಿರಾಕರಿಸಿ ಗಡಿಯಲ್ಲಿಯೇ ತಡೆದಿದ್ದಾರೆ. ಗಡಿ ಪ್ರವೇಶಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಮನಗುತ್ತಿ ಗ್ರಾಮದ ಲಕ್ಷ್ಮಿದೇವಿ ಟ್ರಸ್ಟ್ ಜಾಗದಲ್ಲಿ ಅನಧೀಕೃತವಾಗಿ ಪ್ರತಿಷ್ಠಾಪನೆ ಮಾಡಲಾಗಿದ್ದ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸಮುದಾಯ ಮುಖಂಡರೆ ತೆರವುಗೊಳಿಸಿದ್ದರು. ಆದ್ರೆ ಮಹಾರಾಷ್ಟ್ರದ ಶಿವಸೇನಾ ಕಾರ್ಯಕರ್ತರು ಮೂಗು ತುರಿಸಿದ್ದರಿಂದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು.
ಗ್ರಾಮದ ಹಿರಿಯ ಮುಖಂಡರೆಲ್ಲರು ಸಭೆ ನಡೆಸಿ, ಶಿವಾಜಿ ಮಹರಾಜರ ಪ್ರತಿಮೆ ಸೇರಿ ಮಹರ್ಷಿ ವಾಲ್ಮೀಕಿ, ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ ಹಾಗೂ ಕೃಷ್ಣ ಗೌಳಿ ಒಟ್ಟು ಐವರು ಮಹಾ ಪುರುಷರ ಪ್ರತಿಮೆ ಸ್ಥಾಪಿಸುವುದಕ್ಕೆ ಒಮ್ಮತದ ನಿರ್ಧಾರ ಕೈಗೊಂಡು ಪ್ರಕರಣಕ್ಕೆ ಇತಶ್ರೀ ಹಾಡಿದ್ದರು. ಆದರೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ಶಿವ ಸೈನಿಕರು ಮತ್ತೆ ಗಡಿಯಲ್ಲಿ ಕ್ಯಾತೆ ಆರಂಭಿಸಿದ್ದಾರೆ.