ಬೆಳಗಾವಿ- ಬೆಳಗಾವಿಯ ಓಂ ನಗರದಲ್ಲಿರುವ ಶಿವಗಂಗಾ ರೋಲರ್ ಸ್ಕೇಟಿಂಗ್ ರಿಂಕ್ ನಲ್ಲಿ ಮೇ 31ರಂದು ಸಂಜೆ 7:30 ಗಂಟೆಗೆ ಖ್ಯಾತ ಸಂಗೀತಗಾರರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಈ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಪಂಜಾಬಿ ಗಾಯಕ ಗುರುನಾಥ ಛಟ್ಟಾ, ಸೌರಭ ಶೌರಿ ಹಾಗೂ ಎಂಟಿವಿ ಸ್ಪ್ಲಿಟ್ ವಿಲ್ಲಾ ಸ್ಪರ್ಧೆಯ ರೂರೇಸ್ ಫೈನಲಿಸ್ಟ್, ಮಾರ್ಟಿನಾ ಥಾರಿಯನ್ ಸೇರಿದಂತೆ ಅನೇಕ ಖ್ಯಾತನಾಮ ಕಲಾವಿದರು ಭಾಗವಹಿಸಲಿದ್ದಾರೆ. ಅಂದು ನಡೆಯುವ ಈ ಸಂಗೀತ ಕಾರ್ಯಕ್ರಮಕ್ಕೆ ಸಂಗೀತಾಸಕ್ತರಿಗೆ ಉಚಿತ ಪ್ರವೇಶವಿದೆ ಎಂದು ಜ್ಯೋತಿ ಚಿಂಡಕ್ ತಿಳಿಸಿದ್ದಾರೆ.
ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಅನಿಕೇತ ಚಿಂಡಕ್ ಅಭಿನಯದ “ಜಿಂದಗಿ ಮಿಲತಿ ಹೈ” ಮ್ಯೂಸಿಕ್ ವೀಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈ ವೀಡಿಯೋ ಅಲ್ಬಮ್ ನಲ್ಲಿ ಅನಿಕೇತ ಚಿಂಡಕ್, ಮಾರ್ಟಿನಾ ಥಾರಿಯನ್, ಸಬಸ್ಟೇನ್ ಅಭಿನಯಿಸಿದ್ದಾರೆ. ಸೌರಭ ಶೌರಿ ಹಿನ್ನೆಲೆ ಗಾಯಕರಾಗಿದ್ದಾರೆ. ನಿತೇಶ ರಜಾಡಿಯಾ ಅವರ ನಿರ್ದೇಶನದಲ್ಲಿ ನಿರ್ಮಾಣವಾಗಿರುವ ಮ್ಯೂಸಿಕ್ ವೀಡಿಯೋ ಅಲ್ಬಮ್ ನಲ್ಲಿ ಸಂಗೀತ ನಿರ್ದೇಶಕರಾಗಿ ಡಿ.ಜೆ ಆರ್ ನೇಷನ್ ಅವರು ಕಾರ್ಯನಿರ್ವಹಿಸಿದ್ದಾರೆ.
ವಿಶ್ವ ದಾಖಲೆ
ಸ್ಕೇಟ್ ಲಾನ್, ನಾನ್ ಸ್ಟಾಪ್ ಸ್ಕೇಟಿಂಗ್ ರಿಲೇ
ಸ್ಕೇಟಿಂಗ್ ಕ್ರೀಡೆಯಲ್ಲಿ ಅನೇಕ ವಿಶ್ವ ದಾಖಲೆಗಳನ್ನು ನಿರ್ಮಿಸಿರುವ ಬೆಳಗಾವಿಯ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ ಈಗ ಮತ್ತೊಂದು ವಿಶ್ವ ದಾಖಲೆ ನಿರ್ಮಿಸುವುದಕ್ಕೆ ಸಿದ್ಧವಾಗುತ್ತಿದೆ. ಸ್ಕೇಟ್ ಲಾನ್, ನಾನ್ ಸ್ಟಾಪ್ ಸ್ಕೇಟಿಂಗ್ ರಿಲೇಯಲ್ಲಿ ವಿಶ್ವ ದಾಖಲೆ ನಿರ್ಮಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶಿವಗಂಗಾ ಸ್ಕೇಟಿಂಗ್ ರೂವಾರಿ ಜ್ಯೋತಿ ಚಿಂಡಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜೂನ್ 1ರಿಂದ 3ರವರೆಗೆ ನಿರಂತರವಾಗಿ ಐವತ್ತೊಂದು ಗಂಟೆಗಳ ಕಾಲ ಸ್ಕೇಟ್ ಲಾನ್, ನಾನ್ ಸ್ಟಾಪ್ ಸ್ಕೇಟಿಂಗ್ ರಿಲೇ ನಡೆಯಲಿದ್ದು ವಿಶ್ವದಾಖಲೆ ನಿರ್ಮಿಸಲಿರುವ ಈ ರೀಲೆಯಲ್ಲಿ ಭಾಗವಹಿಸಲು ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಛತ್ತಿಸಗಡ್, ಗೋವಾ, ಗುಜರಾತ್, ದೆಹಲಿ, ಪಂಜಾಬ್, ಚಂಡಿಗಢ್, ಹರ್ಯಾಣಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸುಮಾರು 500ಕ್ಕೂ ಹೆಚ್ಚು ಸ್ಕೇಟಿಂಗ್ ಪಟುಗಳು ಬೆಳಗಾವಿಗೆ ಆಗಮಿಸಿ ಅಭ್ಯಾಸದಲ್ಲಿ ತೊಡಗಿದ್ದಾರೆ.
ಈ ವಿಶ್ವ ದಾಖಲೆಯನ್ನು ಗಮನಿಸಲು ಲಿಮ್ಕಾ ಬುಕ್ ಆಫ್ ರಿಕಾರ್ಡ್ಸ್, ಇಂಡಿಯಾ ಬುಕ್ ಆಫ್ ರಿಕಾರ್ಡ್, ಏಷಿಯಾ ಬುಕ್ ಆಫ್ ರಿಕಾರ್ಡ್, ಯೂನಿಕ್ ವರ್ಲ್ಡ್ ರಿಕಾರ್ಡ್, ಬೆಸ್ಟ್ ಆಫ್ ವರ್ಲ್ಡ್ ರಿಕಾರ್ಡ್, ಇಂಡಿಯನ್ ಯಂಗ್ ಅಚೀವರ್ಸ್ ಬುಕ್ ಆಫ್ ರಿಕಾರ್ಡ್ ನ ಅಧಿಕಾರಿಗಳು ಜೂನ್ 1ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ವಿಶ್ವದಾಖಲೆಯ ಓಟ ಜೂನ್ 1ರಂದು ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗಲಿದ್ದು ಶಾಸಕ ಸಂಭಾಜಿ ಪಾಟೀಲ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಜ್ಯೋತಿ ಚಿಂಡಕ್ ತಿಳಿಸಿದರು.
ಈ ವಿಶ್ವ ದಾಖಲೆಯನ್ನು ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ದೇಶದ ಯೋಧರಿಗೆ ಸಮರ್ಪಿಸಲಾಗುವುದು ಎಂದು ಚಿಂಡಕ್ ತಿಳಿಸಿದರು.