ಬೆಳಗಾವಿ-
ಗಡಿ ಸಮಸ್ಯೆಯನ್ನು ಮುಂದುಮಾಡಿಕೊಂಡು ಬೆಳಗಾವಿಯಲ್ಲಿ ಭಾಷಾ ಸಾಮರಸ್ಯಭಾವವನ್ನು ಕೆದಕಲು ಮುಂದಾಗಿ, ಬೆಳಗಾವಿ ಜಿಲ್ಲೆಯ ಗಡಿಯಿಂದಲೇ ಮಹಾರಾಷ್ಟ್ರಕ್ಕೆ ವಾಪಸಾದ ಮಹಾರಾಷ್ಟ್ರ ರಾಜ್ಯದ ಸಾರಿಗೆ ಮಂತ್ರಿ ದಿವಾಕರ ರಾವತ್ ಅವರು ತಮ್ಮ ಸಾರಿಗೆ ಬಸ್ಸಗಳ ಮೇಲೆ ಇಂದು ‘ಜೈ ಮಹಾರಾಷ್ಟ್ರ’ ಎಂದು ಬರೆದು ತಮ್ಮ ರಾಜ್ಯಭಿಮಾನ ತೋರಿ ಸಾಹಸ ಮೆರೆದಿದ್ದಾರೆ.
ಮುಂಬಯಿ ಸಾರಿಗೆ ಸಚಿವಾಲಯದಲ್ಲಿ ಗುರುವಾರ ಸಂಜೆ ಜೈ ಮಹಾರಾಷ್ಟ್ರ ಎನ್ನುವ ಲಾಂಚನ ಬಿಡುಗಡೆ ಮಾಡಿದ ಸಚಿವರು ಈ ಲಾಂಚನವನ್ನು ಮಹಾರಾಷ್ಟ್ರ ದ ಎಲ್ಲ ಬಸ್ ಗಳಿಗೆ ಹಾಕುವಂತೆ ಸೂಚಿಸಿ ಹೊಸ ಲಾಂಚನವನ್ನು ಮಹಾರಾಷ್ಟ್ರದ ಎಲ್ಲ ಬಸ್ ಡಿಪೋಗಳಿಗೆ ರವಾನಿಸಿದ್ದಾರೆ
ಮಂತ್ರಿಗಳ ಈ ಅಭಿಮಾನವನ್ನು ಸಹಜವಾಗಿ ಮಹಾರಾಷ್ಟ್ರದ ಜನತೆ ಮೆಚ್ಚಬಹುದು. ಆದರೆ, ಪ್ರಜ್ಞಾವಂತ ಜನ ಮಾತ್ರ ಮಂತ್ರಿಗಳ ಅಭಿಮಾನಕ್ಕೆ ಮುಸುಮುಸು ನಗೆಯೊಂದಿಗೆ ಮೌನವಾಗುತ್ತಿದ್ದಾರೆ. ಮಹಾರಾಷ್ಟ್ರದ ಬಗ್ಗೆ ಇದುವರೆಗೆ ಈ ಬಗೆಯ ಅಭಿಮಾನ ಈ ಮಂತ್ರಿಗೆ ಇಲ್ಲವಾದದ್ದು, ಬಂದದಾರಿಗೆ ಸುಂಕವಿಲ್ಲದೆ ಬೆಳಗಾವಿ ಹೊರಗಡೆಯಿಂದಲೇ ತೆರಳಿದ ಮೇಲೆ ಹುಟ್ಟಿಕೊಂಡಿರುವುದು ಕರ್ನಾಟಕದ ಮೇಲಿಂದ, ಕರ್ನಾಟಕ ಸರಕಾರದ ಮೇಲಿಂದ, ಬೆಳಗಾವಿ ಜಿಲ್ಲಾಧಿಕಾರಿಗಳ ನಿಷೇಧಾಜ್ಞೆಯ ಸಿಟ್ಟಿನಿಂದ ಹುಟ್ಟಿಕೊಂಡಿರುವುದಂತೂ ಎಲ್ಲರಿಗೂ ಗೊತ್ತಿರುವ ಸತ್ಯ ಸಂಗತಿ. ಪ್ರಜಾಪ್ರಭುತ್ವ ಮೌಲ್ಯದ ಭಾರತದೊಳಗಿನ ತನ್ನ ನೆರೆಯ ರಾಜ್ಯದ ಸಿಟ್ಟು ದ್ವೇಷದಿಂದ ಹುಟ್ಟಿಕೊಂಡ ಸಾರಿಗೆ ಮಂತ್ರಿಗಳ ಅಭಿಮಾನವನ್ನು ‘ಜೈ ಮಹಾರಾಷ್ಟ್ರ’ ಅಕ್ಷರಗಳನ್ನು ಹೊತ್ತುಕೊಂಡು ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿ ಸಾರಿಗೆ ಬಸ್ಸಗಳು ಇಂದಿನಿಂದ ಸಂಚರಿಸಲಿವೆ.
ತನ್ನ ರಾಜ್ಯದ ವಾಹನಗಳ ಮೇಲೆ ಅಭಿಮಾನ ಪ್ರೀತಿ ತೋರುವ ಮಾತುಗಳನ್ನು ಬರೆದುಕೊಳ್ಳುವ ಹಕ್ಕು ಅವರಿಗೆ ಇರುವುದರಿಂದ ಬರೆದುಕೊಳ್ಳವ ಬಗ್ಗೆ ಪ್ರಶ್ನೆಸುವ ಅಧಿಕಾರ ಇಲ್ಲ. ಆದರೆ, ಇನ್ನೊಂದು ರಾಜ್ಯದ ಬಗ್ಗೆ ದ್ವೇಷಭಾವನೆಯಿಂದ ಹುಟ್ಟಿಕೊಂಡ ಈ ಅಭಿಮಾನ ನಾಡಿನ ಪ್ರೀತಿ ದುರಾಭಿಮಾನವನ್ನು ಬಿಟ್ಟು ಬೇರೆ ಇನ್ನೇನೂ ಸೂಚಿಸಲು ಸಾಧ್ಯ ಹೇಳಿ?