ಬೆಳಗಾವಿ: ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಮೊಟ್ಟ ಮೊದಲ ಸೋಲಿನ ರುಚಿ ತೋರಿಸಿದ ವೀರರಾಣಿ ಚೆನ್ನಮ್ಮನ ನಾಡು ಬೈಲಹೊಂಗಲ. ಕ್ರಾಂತಿಗೆ ಹೆಸರಾದ ಈ ನಾಡು ಅನೇಕ ಶೂರ, ಧೀರರನ್ನು ನಾಡಿಗೆ ಕೊಟ್ಟಿದೆ. ಮಹಿಳಾ ಐಪಿಎಲ್ ನಲ್ಲಿ ಮಿಂಚಿದ ಶ್ರೇಯಾಂಕಾ ಪಾಟೀಲ್ ಕೂಡ ಇದೇ ನಾಡಿನ ಮೊಮ್ಮಗಳು. ಹಾಗಾಗಿ, ಇಲ್ಲಿನ ಜನ ಮತ್ತಷ್ಟು ಅಭಿಮಾನ ಪಡುತ್ತಿದ್ದಾರೆ.
ಇತ್ತಿಚೆಗಷ್ಟೇ ಮುಕ್ತಾಯವಾದ ಮಹಿಳಾ ಐಪಿಎಲ್ ನಲ್ಲಿ ಬೆಂಗಳೂರು ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಪಂದ್ಯಾವಳಿಯಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದ ಶ್ರೇಯಾಂಕಾ ಪಾಟೀಲ ರಾತ್ರೋ ರಾತ್ರಿ ಸ್ಟಾರ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವ ಈ ಯುವತಿ ಬೈಲಹೊಂಗಲ ಮೊಮ್ಮಗಳು ಎಂಬ ವಿಚಾರ ಗೊತ್ತಾಗಿದ್ದು, ಶ್ರೇಯಾಂಕಾ ತಾಯಿ ಪ್ರವೀಣಾ ಬೈಲಹೊಂಗಲ ಪಟ್ಟಣದ ಖ್ಯಾತ ಉದ್ಯಮಿ ಶಿವಕುಮಾರ ಮತ್ತು ಪ್ರೇಮಾ ಮೆಟಗುಡ್ಡ ದಂಪತಿ ಪುತ್ರಿ. ಪ್ರವೀಣಾ ಮೆಟಗುಡ್ಡ ಅವರನ್ನು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೊಳಕೂರ ಗ್ರಾಮದ ಕ್ರಿಕೆಟ್ ಆಟಗಾರ, ತರಬೇತುದಾರ ರಾಜೇಶ ಪಾಟೀಲ ಅವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹವಾದ ನಂತರ ಬೆಂಗಳೂರಿನಲ್ಲಿ ಈ ಕುಟುಂಬ ನೆಲೆಸಿದೆ.
ಶಾಲಾ ಬಿಡುವಿನ ದಿನಗಳಲ್ಲಿ ಅಜ್ಜನ ಮನೆಗೆ ಬಂದು ಬೈಲಹೊಂಗಲದ ಪರಿಸರದಲ್ಲೂ ಬೆಳೆದವಳು. ಚಿಕ್ಕಂದಿನಿಂದಲೇ ಅವಳಿಗೆ ಕ್ರಿಕೆಟ್ ಮೇಲಿನ ಆಸಕ್ತಿ ಹೆಚ್ಚಾಗಿತ್ತು. ಕ್ರಿಕೆಟ್ ಆಟದ ನೇರಪ್ರಸಾರವನ್ನು ಕದಲದೆ ನೋಡುತ್ತಿದ್ದಳು ಎನ್ನುತ್ತಾರೆ ಶ್ರೇಯಾಂಕಾ ಅವರ ಅಜ್ಜಿ ಪ್ರೇಮಾ ಮೆಟಗುಡ್ಡ ಹಾಗೂ ಮಾವ ಮುತ್ತು ಮೆಟಗುಡ್ಡ. ಶ್ರೇಯಾಂಕಾಗೆ ಚಿಕ್ಕವಳಿದ್ದಾಗಿನಿಂದಲೂ ಕ್ರಿಕೆಟ್ ಅಂದ್ರೆ ಇಷ್ಟ. ಆರ್‌ಸಿಬಿ ತಂಡ ಹಾಗೂ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಂದರೆ ಎಲ್ಲಿಲ್ಲದ ಪ್ರೀತಿ. ಇನ್ನು ಆಕೆ ಕ್ರಿಕೆಟ್‌ಗೆ ಬರಲು ಕೊಹ್ಲಿಯೇ ಕಾರಣ. ಬೆಂಗಳೂರಿನ ಜಸ್ಟ್, ಸಿಕ್ಸ್ ಹಾಗೂ ನೈಸ್ ಕ್ರಿಕೆಟ್ ಅಕಾಡೆಮಿಯಲ್ಲಿ ತನ್ನ ಕರಿಯರ್ ಆರಂಭಿಸಿದ ಶ್ರೇಯಾಂಕಾ ಸದ್ಯ ನೈಸ್ ಕ್ರಿಕೆಟ್ ಅಕಾಡೆಮಿಯಲ್ಲಿ ಅನುಭವಿ ಅರ್ಜುನ್ ದೇವ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಐಪಿಎಲ್ ನಲ್ಲಿ ಮಿಂಚಿದ ಶ್ರೇಯಾಂಕಾ ಪಾಟೀಲ್ ಬೈಲಹೊಂಗಲ್ ಮೊಮ್ಮಗಳು ಎಂಬ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾಕಷ್ಟು ಜನರು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.