ಬೆಳಗಾವಿ: ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ, ನಮ್ಮ ಬೇಡಿಕೆಯನ್ನು ಮನವರಿಕೆ ಮಾಡಲು ಪ್ರಧಾನಮಮಂತ್ರಿ ನರೇಂದ್ರ ಮೋದಿ ಅವರ ಬಳಿಗೆ ಶೀಘ್ರವೇ ಮಠಾಧೀಶರ ನಿಯೋಗ ತೆರಳಲಿದೆ ಎಂದು ನಾಗನೂರ ರುದ್ರಾಕ್ಷಿ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಇಂದಿಲ್ಲಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಬಹುಸಂಖ್ಯಾತ ಸಮಾಜದ ವಿರೋಧವನ್ನು ಬಿಜೆಪಿ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚಳವಳಿ ದನಿ ಕ್ಷೀಣಿಸಿಲ್ಲ. ಕೇಂದ್ರ ಸರ್ಕಾರಕ್ಕೆ ಸಮಯ ನೀಡಿದ್ದೇವೆ. ಆದರೆ, ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸು ಕಡತ ವಾಪಸ ಆಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅಂತಹ ಬೆಳವಣಿಗೆ ನಡೆದಿಲ್ಲ. ರಾಜ್ಯ ಕಳುಹಿಸಿರುವ ಶಿಫಾರಸು ಕೇಂದ್ರದ ಅಂಗಳದಲ್ಲಿಯೇ ಇದೆ. ಚಳವಳಿ ದನಿ ಅಡಗಿಸುವ ದುರುದ್ದೇಶದಿಂದ ಹಿಂದೂಪರವಾಗಿರುವ ವೀರಶೈವವಾದಿಗಳ ಕೈವಾಡದಿಂದಾಗಿ ಅಪಪ್ರಚಾರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಒಂದೊಮ್ಮೆ ಕೇಂದ್ರ ಸರ್ಕಾರವು ವಾಪಸ ಮಾಡಿದರೆ ನಮಗೇ ಅನುಕೂಲವಾಗುತ್ತದೆ. ಸುಪ್ರೀಂ ಕೋರ್ಟ್‌ಗೆ ಹೋಗಿ ನ್ಯಾಯ ಕೇಳುತ್ತೇವೆ. ಹೀಗಾಗಿ ಆ ಧೈರ್ಯವನ್ನು ಕೇಂದ್ರ ಮಾಡುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದರು. ಸಮಾಜಕ್ಕೆ ಅನ್ಯಾಯವಾದರೆ ರಾಷ್ಟ್ರೀಯ ಪಕ್ಷ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಧರ್ಮದ ಹೋರಾಟದಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಲಿಂಗಾಯತ ಹೋರಾಟದ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ೭೯ ಸ್ಥಾನಗಳಲ್ಲಿ ಗೆಲುವುಸಾಧಿಸಿದೆ. ಇಲ್ಲದಿದ್ದರೆ ಇಷ್ಟು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಅಸಾಧ್ಯವಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.
ಲಿಂಗಾಯತ ಹೋರಾಟದಲ್ಲಿ ಪಾಲ್ಗೊಂಡಿರುವ ಕಾರಣ ಜೆಡಿಎಸ್- ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಿಂದ ಎಂ.ಬಿ. ಪಾಟೀಲ , ಬಸವರಾಜ ಹೊರಟ್ಟಿ ಅವರನ್ನು ದೂರಿಡಲಾಗಿದೆ. ಉದ್ದೇಶ ಪೂರ್ವಕವಾಗಿಯೇ ಲಿಂಗಾಯತ ಸಮಾಜವನ್ನು ಕಡೆಗಣಿಸಲಾಗಿದೆ. ಜಿಲ್ಲಾ ವಾರು, ಜಾತಿವಾರು ಸಚಿವ ಸ್ಥಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.