ಬೆಳಗಾವಿ- ನಾಳೆಯಿಂದ ೨೪ರ ವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಮಹಾದಾಯಿ ನದಿ ನೀರಿನ ಹಂಚಿಕೆ, ಕಬ್ಬು ಬೆಳೆಗಾರರ ಸಮಸ್ಯೆ, ನಂಜುಂಡಪ್ಪ ವರದಿಯ ಅನುಷ್ಠಾನದ ಸತ್ಯಾಸತ್ಯತೆಯ ಸೇರಿದಂತೆ ಅನೇಕ ಜಲ್ವಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ನಡೆಯಬೇಕಾಗಿದೆ ಎಂದು ವಿಧಾನ ಸಭೆಯ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದ್ದಾರೆ.
ಬೆಳಗಾವಿಯಲ್ಲಿ ಇಂದು ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಕಲ್ಯಾಣ ಕಾರ್ಯಕ್ರಮ ಯೋಜನೆಗಳ ಬಗ್ಗೆ ಸದನದಲ್ಲಿ ಸಮಾಲೋಚನೆ ನಡೆಯಬೇಕು ಎಂದು ಹೇಳಿದರು.
ಬೆಳಗಾವಿ ಸುವರ್ಣ ವಿಧಾನಸೌಧ ವರ್ಷದ ಉದ್ದಕ್ಕೂ ಕಾರ್ಯಪ್ರವೃತ್ತವಾಗಬೇಕು. ಇದಕ್ಕೆ ಸರ್ಕಾರದ ಅನೇಕ ಇಲಾಖೆಗಳ ವರ್ಗಾವಣೆ ನಡೆಯಬೇಕು. ಇದರಿಂದ ಸೌಧದ ಸೂಕ್ತ ನಿರ್ವಹಣೆ ಹಾಗೂ ಆಡಳಿತ ಅನುಕೂಲ ವಾಗಲಿದೆ ಎಂದು ಮೇಲಿಂದ ಮೇಲೆ ಒತ್ತಾಯಿಸುತ್ತ ಬಂದಿದ್ದೇನೆ. ಆದರೆ, ಅದು ಇದುವರೆಗೂ ಈಡೇರದ ಬಗ್ಗೆ ನೋವಿದೆ ಎಂದು ಅವರು ಹೇಳಿದರು.
ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಆಗಬೇಕು. ಇದರಿಂದ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ವಸತಿ ಹಾಗೂ ಇತರೆ ಖರ್ಚುಗಳ ನಿಯಂತ್ರಣಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.