ತಿರುಪತಿ: ಆಂಧ್ರ ಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಏಳು ಮಂದಿ ಸಾವನಪ್ಪಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.
ಭಕ್ತಾದಿಗಳು ತಿರುಪತಿಯ ವೈಕುಂಠ ದ್ವಾರ ದರ್ಶನದ ಟಿಕೆಟ್ ತೆಗೆದುಕೊಳ್ಳುವ ವೇಳೆ ಭಾರಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿದೆ. ಟಿಕೆಟ್ ಪಡೆದುಕೊಳ್ಳಲು ಏಕಕಾಲಕ್ಕೆ ಸಾವಿರಾರು ಮಂದಿ ನುಗ್ಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಇದುವರೆಗೆ ಒಂದು ಮೃತದೇಹವನ್ನು ಗುರುತಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ತಾನಮ್ಸ್ (ಟಿಟಿಡಿ) ಅಧ್ಯಕ್ಷ ಬಿಆರ್ ನಾಯ್ಡು ಹೇಳಿದ್ದಾರೆ.
ಜನವರಿ 10 ರಂದು ವೈಕುಂಠ ಏಕಾದಶಿಯ ಹಿನ್ನಲೆಯಲ್ಲಿ ತಿರುಪತಿಯ ಕೌಂಟರ್‌ಗಳಲ್ಲಿ ನಾಳೆ ಬೆಳಗ್ಗೆಯಿಂದ ಟಿಕೆಟ್ ವಿತರಿಸಲು ನಿರ್ಧರಿಸಲಾಗಿತ್ತು ಎನ್ನಲಾಗಿದೆ.
“ಒಬ್ಬ ಡಿಎಸ್ಪಿ ಗೇಟ್‌ಗಳನ್ನು ತೆರೆದರು ಮತ್ತು ತಕ್ಷಣವೇ ಎಲ್ಲರೂ ಮುಂದಕ್ಕೆ ತಳ್ಳಿದರು ಈ ಕಾಲ್ತುಳಿತಕ್ಕೆ ಕಾರಣವಾಯಿತು” ಎಂದು ನಾಯ್ಡು ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದರು.
ಏತನ್ಮಧ್ಯೆ, ಪೊಲೀಸರು ಒಂದಿಬ್ಬರು ಮಹಿಳಾ ಭಕ್ತರಿಗೆ ಸಿಪಿಆರ್ ನಡೆಸುತ್ತಿರುವ ಮತ್ತು ಗಾಯಗೊಂಡ ವ್ಯಕ್ತಿಗಳನ್ನು ಆಂಬ್ಯುಲೆನ್ಸ್‌ಗಳಲ್ಲಿ ಸ್ಥಳಾಂತರಿಸುವ ವೀಡಿಯೊಗಳು ವೈರಲ್ ಆಗಿವೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.