ಬೆಳಗಾವಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಅಂತಿಮ ಪಟ್ಟಿ ಇಂದು ಸಂಜೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಬೆಳಗಾವಿ ಕ್ಷೇತ್ರದಿಂದ ಡಾ.ವಿ.ಎಸ್.ಸಾಧುನವರ ಅವರ ಹೆಸರೇ ಅಂತಿಮವಾಗುವ ಸಾಧ್ಯತೆಗಳಿವೆ
ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ನಿನ್ನೆಯಷ್ಟೇಬಿಜೆಪಿಯ ಮೊದಲ ಪಟ್ಟಿ ಪ್ರಕಟವಾಗಿದ್ದು, ಬೆಳಗಾವಿ ಕ್ಷೇತ್ರದಿಂದ ಹಾಲಿ ಸಂಸದ ಸುರೇಶ ಅಂಗಡಿ ಅವರಿಗೆ ಟಿಕೆಟ್ ನೀಡಲಾಗಿದ್ದು, ಅಂಗಡಿ ಅವರು ಈಗ ನಾಲ್ಕನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಬಿಜೆಪಿ ಹಾದಿ ಸುಗಮವಾಗಿದೆ. ಆದರೆ, ಕಾಂಗ್ರೆಸ್‍ನಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬ ತೀವ್ರ ಕುತೂಹಲ ಕೆರಳಿಸಿದೆ. ಮಾಜಿ ಸಂಸದ ಎಸ್.ಬಿ.ಸಿದ್ನಾಳ ಅವರ ಪುತ್ರ ಶಿವುಕಾಂತ ಸಿದ್ನಾಳ ಮತ್ತುಡಾ.ವಿ.ಎಸ್.ಸಾಧುನವರ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಸಾಧುನವರಿಗೆ ಅವರಿಗೆ ಟಿಕೆಟ್ ಸಿಗುವುದು ಪಕ್ಕಾ ಆಗಿದೆ
ಎಂದು ಪಕ್ಷದ ಮೂಲಗಳಿಂದತಿಳಿದುಬಂದಿದೆ.
ಬೆಳಗಾವಿ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಲಿಂಗಾಯತ ಸಮುದಾಯದ ಪ್ರಮುಖ ನಾಯಕರ ನಡುವೆಯೇ ಜಿದ್ದಾಜಿದ್ದಿ ಕದನ ನಡೆಯಲಿದೆ.
ಚಿಕ್ಕೋಡಿ ಕ್ಷೇತ್ರದಿಂದ ಹಾಲಿ ಕಾಂಗ್ರೆಸ್ ಸಂಸದ ಪ್ರಕಾಶ ಹುಕ್ಕೇರಿ ಅವರೇ ಕಣಕ್ಕಿಳಿಯುವುದು ನಿಶ್ಚಿತವಾಗಿದೆ. ಆದರೆ, ಬಿಜೆಪಿ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾಡಿಲ್ಲ. ಎರಡು ದಿನಗಳಿಂದ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ, ಉದ್ಯಮಿ ಅಣ್ಣಾಸಾಹೇಬ ಜೊಲ್ಲೆ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಅಲ್ಲದೇ, ಮಾಜಿ ಸಂಸದ ರಮೇಶ ಕತ್ತಿ ಅವರು ಕೂಡ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಹಾಗಾಗಿ, ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಘೋಷಣೆ ಕೈಬಿಡಲಾಗಿದೆ.
ಒಂದು ವೇಳೆ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಬಿಜೆಪಿ ಟಿಕೆಟ್ ನೀಡಿದಲ್ಲಿ, ಮಾಜಿ ಸಂಸದ ರಮೇಶ ಕತ್ತಿ ಬಂಡಾಯದ ಬಾವುಟ ಹಾರಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದು ಬಿಜೆಪಿ ಪಾಳೇಯಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ರಮೇಶ ಕತ್ತಿ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಈ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ ಹಳೆ ಹುಲಿಗಳ ನಡುವೆ ಮತ್ತೆ ಜಿದ್ದಾಜಿದ್ದಿ ಕದನಕ್ಕೆ ವೇದಿಕೆ ಸಜ್ಜಾಗಲಿದೆ.