ಎರಡು ವರ್ಷಗಳ ಬಳಿಕ ಧಾರವಾಡ ಭೇಟಿಗೆ ಕೋರ್ಟ್ ಅಸ್ತು; ವಿದ್ಯಾಕಾಶಿಯಲ್ಲಿ 3 ಗಂಟೆ ಇರಲಿವೆ ವಿಕೆ ಬಾಸ್
ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಎರಡು ವರ್ಷಗಳ ಬಳಿಕ ಧಾರವಾಡ ಭೇಟಿಗೆ ಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ.
ನ್ಯಾಯಾಲಯ ವಿಧಿಸಿದ್ದ ಷರತ್ತಿನಿಂದಾಗಿ ಬೆಳಗಾವಿ ಜೈಲಿನಿಂದ ಬಿಡುಗಡೆಯಾಗಿದ್ದರೂ ಧಾರವಾಡ ಜಿಲ್ಲೆಗೆ ಭೇಟಿ ನೀಡಲು ಸಾಧ್ಯವಾಗಿರದ ಮಾಜಿ ಸಚಿವ ವಿನಯ್ ಕುಲಕರ್ಣಿ ಕೊನೆಗೂ ಭೇಟಿ ನೀಡಲು ಕೋರ್ಟ್ ಷರತ್ತುಬದ್ದ ಅನುಮತಿ ನೀಡಿದೆ..
ಅನಾರೋಗ್ಯಕ್ಕೆ ತುತ್ತಾಗಿ ಹುಬ್ಬಳ್ಳಿಯ ತುರ್ತು ನಿಗಾ ಘಟಕ (ಐಸಿಯು)ನಲ್ಲಿರುವ ಸಹೋದರ ಸಂಬಂಧಿ ಮಾಜಿ.ಜಿ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲರನ್ನು ಭೇಟಿ ಮಾಡಲು ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಹೋದರಿ ಕ್ಷೇಮ ವಿಚಾರಿಸಲು ಕಾಲಾವಕಾಶ ಕೋರಿದ್ದರು. ಆ ಮನವಿಯನ್ನು ಮಾನ್ಯ ಮಾಡಿ
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಜಯಂತ್ ಕುಮಾರ್ ಷರತ್ತಿನ ಅನುಮತಿಯನ್ನು ಮಂಜೂರು ಮಾಡಿದ್ದಾರೆ.
ಬೆಂಗಳೂರಿನ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಮೊದಲೇ ಮಾಹಿತಿ ನೀಡಬೇಕು, ಧಾರವಾಡ ಜಿಲ್ಲೆಯ ವ್ಯಾಪ್ತಿಗೆ ಬರುವ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಲಕ್ಷ್ಮಿ ಅವರನ್ನು ಕೇವಲ ಮೂರು ತಾಸುಗಳ ಕಾಲ ಭೇಟಿ ಮಾಡಬೇಕು, ಮೂರು ಗಂಟೆಗೂ ಅಧಿಕ ಸಮಯ ಧಾರವಾಡ ವ್ಯಾಪ್ತಿಯಲ್ಲಿ ಉಳಿಯುವಂತಿಲ್ಲ.ಅಲ್ಲದೇ, ಪ್ರಾಸಿಕ್ಯೂಷನ್ ಸಾಕ್ಷ್ಯಗಳಿಗೆ ಬೆದರಿಕೆ ಹಾಕುವ ಯಾವುದೇ ಕೃತ್ಯದಲ್ಲಿ ತೊಡಗುವಂತಿಲ್ಲ. ಆಸ್ಪತ್ರೆಗೆ ಭೇಟಿ ಮಾಡುವುದನ್ನು ಹೊರತುಪಡಿಸಿ ಅಲ್ಲಿ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಪ್ರಾಸಿಕ್ಯೂಷನ್‌ನ ಯಾವುದೇ ಸಾಕ್ಷ್ಯಗಳನ್ನು ಭೇಟಿ ಮಾಡುವಂತಿಲ್ಲ ಎಂದು ಹಲವು ಷರತ್ತಗಳನ್ನು ನ್ಯಾಯಾಲಯ ವಿಧಿಸಿದೆ.