ಬೆಳಗಾವಿ- ಸಮ್ಮಿಶ್ರ ಸರಕಾರ ಕುಂಬಕರ್ಣ ನಿದ್ರೆಯಲ್ಲಿದೆ. ಸಚಿವರು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಹೋಗಿ ಮನವಿ ಸ್ವೀಕರಿಸುತ್ತಿಲ್ಲ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತೇ ಸರಕಾರದ ವಿರುದ್ದ ಹರಿಹಾಯ್ದರು.
ಸೋಮವಾರ ಸುವರ್ಣ ವಿಧಾನಸೌಧದ ಎದುರಿನ ಕೊಂಡಸಕೊಪ್ಪ ಗ್ರಾಮದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ನಡೆಸುತ್ತಿರುವ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ಸಮ್ಮಿಶ್ರ ಸರಕಾರದ ಆಡಳಿತ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ ಅವರಿಗೆ ರಾಜ್ಯದ ಜನರ ಸಮಸ್ಯೆಯ ಬಗೆ ಹರಿಸುವಲ್ಲಿ ವಿಫಲರಾಗಿದ್ದಾರೆ. ಅವರ ಸರಕಾರದ ಹಾಗೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಕ್ರಷರ್ ಮಾಲೀಕರ ಸಮಸ್ಯೆಗಳ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಿ ಸರಕಾರದ ಗಮನ ಸೆಳೆಯುವೆ ಎಂದರು.
ಇದಕ್ಕೂ ಮುನ್ನ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಮಾತನಾಡಿ, ಅಧಿಕಾರಿಗಳಿಂದ ಕಿರುಕುಳ ಭಾರಿ ಪ್ರಮಾಣದ ದಂಡ ವಿಧಿಸುತ್ತಿರುವುದನ್ನು ರದ್ದು ಪಡಿಸುವಂತೆ ಡಿ. 17 ಸೋಮವಾರ ಸುವರ್ಣ ವಿಧಾನಸೌಧದ ಬಳಿಯ ಕೊಂಡಸಕೊಪ್ಪದಲ್ಲಿ ಸುಮಾರು 30 ಸಾವಿರ ಜನರು ತಲೆ ಮೇಲೆ ಕಲ್ಲು ಇಟ್ಟುಕೊಂಡು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕ್ವಾರಿ ಉದ್ಯಮದ ಕಲ್ಲುಗಳು ಶೇ. 90 ರಷ್ಟು ಸರಕಾರಿ ಕೆಲಸಕ್ಕೆ ಬಳಕೆ ಆಗ್ತಿದೆ. ಆದರೆ, ಅಧಿಕಾರಿಗಳು ಕ್ವಾರಿ ಅಳತೆ ಮಾಡಿ ಕೋಟ್ಯಂತರ ರೂ. ಬೇಡಿಕೆ ಇಡ್ತಿದ್ದಾರೆ. 50 ವರ್ಷ ಹಳೆಯ ಕ್ವಾರಿನ ಈಗ ಅಳತೆ ಮಾಡುತ್ತಿದ್ದಾರೆ.
ಸರಕಾರ ಹಾಕಿರುವ ನಿಯಮ ಪಾಲನೆ ಮಾಡೋಕೆ ಆಗದ ರೀತಿಯಲ್ಲಿ ಇವೆ. ಅದನ್ನ ಮುಂದಿಟ್ಟು ಅಧಿಕಾರಿಗಳು ವಸೂಲಿ ಮಾಡುತ್ತಿದ್ದಾರೆ. ಲಕ್ಷಾಂತರ ರು. ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ರಾಜ್ಯ ಮತ್ತು ರಾಷ್ಟ್ರದ ಪ್ರಗತಿಗೆ ಪೂರಕವಾದ ಕಲ್ಲುಗಳನ್ನು ಪೂರೈಕೆ ಮಾಡುತ್ತಿದ್ದು,ದೇಶದ ಅಭುದ್ಯಯಲ್ಲಿ ಪಾಲುದಾರಿಯಾಗಿದ್ದೇವೆ. ಆದರೆ ಸರಕಾರ ನಮ್ಮ ಬದುಕಿನ ಮೇಲೆ ಕಲ್ಲು ಎತ್ತಿ ಹಾಕುವ ಕೆಲಸ ಮಾಡುತ್ತಿದೆ. ದಿನಕ್ಕೊಂದು ಹೊಸ ಕಾನೂನು ರೂಪಿಸಿ ಜಾರಿಗೆ ತರುತ್ತಿದೆ. ಇದರಿಂದ. ಅನಗತ್ಯ ಗೊಂದಲ ತೊಂದರೆಯಾಗುತ್ತಿದೆ ಎಂದು ದೂರಿದರು.
ಮುಧೋಳ ಡಿಸ್ಟಲರಿ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿದ್ದಂತೆ ಸಿಎಂ ಕುಮಾರಸ್ವಾಮಿ ಮೃತರಿಗೆ ಇನ್ನೂ ಪರಿಹಾರ ಘೋಷಿಸಿಲ್ಲ. ಈ ಕುರಿತು ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದು ಪ್ರತಿ ಪಕ್ಷ ನಾಯಕ ಯಡಿಯೂರಪ್ಪ ಹೇಳಿದರು.