ನೆರೆಹಾನಿ: ಕೇಂದ್ರ ಅಧ್ಯಯನ ತಂಡ ಭೇಟಿ; ಪರಿಶೀಲನೆ
ಬೆಳಗಾವಿ, ಸೆ.8(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು ಮಂಗಳವಾರ (ಸೆ.8) ಭೇಟಿ ನೀಡಿ ಪರಿಶೀಲಿಸಿತು
ಹೈದ್ರಾಬಾದ್ ನಲ್ಲಿರುವ ಕೃಷಿ ಇಲಾಖೆಯ ಎಣ್ಣೆಬೀಜಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರಾದ ಡಾ.ಮನೋಹರನ್ ಹಾಗೂ ಬೆಂಗಳೂರಿನ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಎಂಜಿನಿಯರ್ ಗುರುಪ್ರvಸಾದ್ ಜೆ. ಅವರು ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂಚರಿಸಿ ಮಾಹಿತಿಯನ್ನು ಕಲೆಹಾಕಿದರು.
ನಗರಕ್ಕೆ ಆಗಮಿಸಿದ ಇಬ್ಬರು ಸದಸ್ಯರ ತಂಡವನ್ನು ಸ್ವಾಗತಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ವಿವರಿಸಿದರು.
ಸೋಯಾಬಿನ್ ಬೆಳೆ ಪರಿಶೀಲನೆ:
ಮೊದಲಿಗೆ ಹುಕ್ಕೇರಿ ತಾಲ್ಲೂಕಿನ ಬಡಕುಂದ್ರಿ ಗ್ರಾಮಕ್ಕೆ ಭೇಟಿ ನೀಡಿದ ತಂಡವು ಅತಿವೃಷ್ಟಿಯಿಂದ ಸೋಯಾಬಿನ್ ಬೆಳೆ ಹಾನಿಯನ್ನು ಪರಿಶೀಲಿಸಿತು.
1.17 ಎಕರೆಯಲ್ಲಿ ಬೆಳೆದ ಸೋಯಾಬಿನ್ ಬೆಳೆ ಕಟಾವಿಗೆ ಬಂದಿತ್ತು. ಆದರೆ ಮಳೆಯಿಂದಾಗಿ ಸಂಪೂರ್ಣ ಹಾನಿಯಾಗಿದೆ. ಎಕರೆಗೆ 15 ಸಾವಿರ ಖರ್ಚು ಮಾಡಿದ್ದು, 15 ಕ್ವಿಂಟಲ್ ಬೆಲೇಯ ನಿರೀಕ್ಷೆಯಿತ್ತು. ಮಳೆಯಿಂದ ಇದೀಗ ಸಂಪೂರ್ಣ ಬೆಳೆ ನಾಶವಾಗಿದೆ ಎಂದು ರೈತ ಅಳಲು ತೋಡಿಕೊಂಡರು.
ಬಡಕುಂದ್ರಿ ಗ್ರಾಮದಲ್ಲಿ 30 ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ವಿವರಿಸಿದರು.
ಸೋಯಾಬಿನ್ ಬೆಳೆಯಲು ಬ್ಯಾಂಕಿನಿಂದ ಸಾಲ ಪಡೆಯಲಾಗಿದೆಯೇ ಎಂದು ತಂಡದ ಮುಖ್ಯಸ್ಥ ಮನೋಹರನ್ ರೈತನನ್ನು ಪ್ರಶ್ನಿಸಿದರು.
ಇದಲ್ಲದೇ ಬೇರೆ ಬೆಳೆ ನಾಶವಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ತಿ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಕಟಾವಿಗೆ ಬಂದಿದ್ದ ಸೋಯಾಬಿನ್ ಬೆಳೆ ಸಂಪೂರ್ಣ ನಾಶವಾಗಿದೆ. ಪ್ರತಿವರ್ಷವೂ ಇದೇ ರೀತಿ ಬೆಳೆಹಾನಿಯಾಗುತ್ತಿದೆ ಎಂದು ಕೇಂದ್ರ ಅಧ್ಯಯನ ತಂಡಕ್ಕೆ ತಿಳಿಸಿದರು.
ಹಿರಣ್ಯಕೇಶಿ ನದಿ ದಂಡೆಯಲ್ಲಿರುವ ಚೌಗಲಾ ಎಂಬುವವರ ಜಮೀನನಲ್ಲಿ ಸೋಯಾಬಿನ್ ಹಾಗೂ ಪಕ್ಕದಲ್ಲಿದ್ದ ಕಬ್ಬು ಬೆಳೆಹಾನಿ ಬಗ್ಗೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ರೈತರು ಪ್ರತಿವರ್ಷ ಬೆಳೆಹಾನಿ ತಪ್ಪಿಸಲು ನದಿ ದಂಡೆಯ ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಅವರು, ಪ್ರತಿವರ್ಷ ಎದುರಾಗುತ್ತಿರುವ ಸಮಸ್ಯೆಯನ್ನು ವಿವರಿಸಿದರು.
ಹೊಸೂರಿನಲ್ಲಿ ಗಜ್ಜರಿ ಬೆಳೆಹಾನಿ ಪರಿಶೀಲಿಸಿದರು. ಎಕರೆಗೆ ಮೂರು ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಆದರೆ ಬೆಳೆಹಾನಿಯಿಂದ ದಿಕ್ಖು ತೋಚದಂತಾಗಿದೆ ಎಂದು ರೈತರು ಕೇಂದ್ರ ತಂಡಕ್ಕೆ ತಿಳಿಸಿದರು.
ನಂತರ ಪಕ್ಕದ ಇಂಗಳಿ ಗ್ರಾಮದ ಕಲ್ಲಪ್ಪ ಅವರ ಜಮೀನಿನಲ್ಲಿ ಹಿನ್ನೀರಿನಿಂದ ಹಾನಿಗೊಳಗಾದ ಮೆಕ್ಕೆಜೋಳದ ಬೆಳೆಯನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ ಅವರು, ಹುಕ್ಕೇರಿ, ಗೋಕಾಕ ಸೇರಿದಂತೆ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆಹಾನಿಯ ಕುರಿತು ಮಾಹಿತಿಯನ್ನು ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಉಪ ವಿಭಾಗಾಧಕಾರಿ ಅಶೋಕ ತೇಲಿ, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಎಚ್.ಡಿ.ಕೋಳೇಕರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಕ ರವೀಂದ್ರ ಹಕಾಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
***