ಬೆಳಗಾವಿ: ಇದೇ 23ರಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಈ ಉತ್ಸವದ ಅಂಗವಾಗಿ ಬೈಲಹೊಂಗಲನಲ್ಲಿರುವ ಕಿತ್ತೂರು ರಾಣಿ ಚನ್ನಮ್ಮನ ಸಮಾಧಿ ಬಳಿಯಿಂದ ಚನ್ನಮ್ಮನ ವಿಜಯೋತ್ಸವ ವೀರಜ್ಯೋತಿ ಸಂಚಾರಕ್ಕೆ ಭಾನುವಾರ(ಅ.16) ಚಾಲನೆ ನೀಡಲಾಯಿತು.
ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ಪ್ರತೀಕವಾಗಿರುವ ಈ ವೀರಜ್ಯೋತಿಯ ಸಂಚಾರದೊಂದಿಗೆ ಈ ಬಾರಿಯ ಕಿತ್ತೂರು ಉತ್ಸವಕ್ಕೆ ಅಧಿಕೃತ ಚಾಲನೆ ದೊರೆತಂತಾಗಿದೆ.
ಸಣ್ಣ ಕೈಗಾರಿಕೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಮೇಶ ಜಾರಕಿಹೊಳಿ ಅವರು, ಚನ್ನಮ್ಮನ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ವೀರಜ್ಯೋತಿ ಸಂಚಾರಕ್ಕೆ ಚಾಲನೆ ನೀಡಿದರು.
ರಾಷ್ಟ್ರೀಯ ಸ್ಮಾರಕ ಘೋಷಣೆಗೆ ಪ್ರಸ್ತಾವನೆ:
ದೀಪ ಬೆಳಗುವ ಮೂಲಕ ವೀರಜ್ಯೋತಿ ಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು, ಚನ್ನಮ್ಮನ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಮ್ಮನ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಹಿರಿಯರೊಂದಿಗೆ ಚರ್ಚಿಸಿದ ನಂತರ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುವಂತೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗಿರುವ ರಾಣಿ ಚನ್ನಮ್ಮ ಸಮಾಧಿ ಪುಣ್ಯಸ್ಥಳದ ಮಹಾದ್ವಾರವನ್ನು ಸಚಿವ ಜಾರಕಿಹೊಳಿ ಅವರು ಉದ್ಘಾಟಿಸಿದರು.
ರಾಯಣ್ಣ ಪ್ರತಿಮೆ-ಭೂಮಿಪೂಜೆ:
ಇದಕ್ಕೂ ಮುನ್ನ ಬೈಲಹೊಂಗಲದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಎದುರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಸಚಿವ ರಮೇಶ ಜಾರಕಿಹೊಳಿ ಅವರು ಭೂಮಿಪೂಜೆಯನ್ನು ನೆರವೇರಿಸಿದರು.
ಬೈಲಹೊಂಗಲ ಮೂರುಸಾವಿರಮಠದ ಪ್ರಭುಲಿಂಗ ನೀಲಕಂಠ ಸ್ವಾಮೀಜಿ, ಶಾಸಕ ವಿ.ಐ.ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಪುರಸಭೆ ಅಧ್ಯಕ್ಷ ರಾಜು ಜಾನಮಟ್ಟಿ, ಸದಸ್ಯರಾದ ಮಹಾಂತೇಶ ಚುರಮುರಿ, ವಿರುಪಾಕ್ಷ ವಾಲಿ, ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲ್ದಾರ ಪ್ರಕಾಶ ಗಾಯಕವಾಡ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.