ಬೆಂಗಳೂರು, ಜೂನ್ 10 : ಕೊರೋನಾದಿಂದ ಉದ್ಭವಿಸಿರುವ ಸಂಕಷ್ಟದ ಪರಿಣಾಮ ರಾಜ್ಯದ ನೇಕಾರರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗದೆ ತೀವ್ರ ತೊಂದರೆಗೆ ಈಡಾಗಿದ್ದು, ಇಂತಹ ನೇಕಾರ ಸಮುದಾಯದ ಸಹಾಯಕ್ಕೆ ಮುಂದಾಗುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದರು.
ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಸಚಿವರ ನೇತೃತ್ವದ ನಿಯೋಗ ರಾಜ್ಯ ಸರ್ಕಾರ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸೀರೆಗಳನ್ನು ಸರಬರಾಜು ಮಾಡುತ್ತಿದ್ದು, ಈ ಸೀರೆಗಳನ್ನು ನೇರವಾಗಿ ನೇಕಾರರಿಂದಲೇ ಖರೀದಿಸಬೇಕು ಎಂದು ಮನವಿ ಮಾಡಿದರು.
ಕೋವಿಡ್-19 ರ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಾದ್ದರಿಂದ ರಾಜ್ಯದ ನೇಕಾರರ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ ಆ ಸಮುದಾಯ ಆರ್ಥಿಕವಾಗಿ ತೀವ್ರ ಪೆಟ್ಟು ತಿಂದಿದೆ ಎಂಬ ಸಚಿವರ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ನಡೆಯುವ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಸಚಿವೆ ಶಶಿಕಲಾ ಜೊಲ್ಲೆ ಅವರ ನೇತೃತ್ವದ ನಿಯೋಗದಲ್ಲಿ ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಶಾಸಕರಾದ ಅಭಯ ಪಾಟೀಲ್, ಮಹಾಂತೇಶ ದೊಡ್ಡಗೌಡರ, ಅನಿಲ್ ಬೆನಕೆ, ಮಹದೇವಪ್ಪಾ ಯಾದವಾಡ ಉಪಸ್ಥಿತರಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ