ಬೆಳಗಾವಿ, -: ಎಸಿಬಿ ಅಧಿಕಾರಿಗಳು ಎಂದು ಹೇಳಿಕೊಂಡು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡುವ ವಂಚಕರ ಜಾಲವನ್ನು ಎಸಿಬಿ ಭೇದಿಸಿದೆ.
ಬೈಲಹೊಂಗಲ ಕೃಷಿ ಅಧಿಕಾರಿಯೊಬ್ಬರನ್ನು ಹೆದರಿಸಿ ಅಕ್ರಮವಾಗಿ ಐದು ಲಕ್ಷ ರೂಪಾಯಿ ಹಣ ವಸೂಲಿಗೆ ಯತ್ನಿಸಿದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಸೇರಿದಂತೆ ಇಬ್ಬರನ್ನು ಈಚೆಗೆ ಬಂಧಿಸಲಾಗಿರುತ್ತದೆ.
ಎಸಿಬಿ ಅಧೀಕ್ಷಕರ ಮಾರ್ಗದರ್ಶನದಲ್ಲಿ ಈ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸ್ ಹಾಗೂ ಎಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವು ಅತ್ಯಂತ ಚಾಣಾಕ್ಷತನದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಎಸಿಬಿ ಅಧಿಕಾರಿಗಳು ಎಂದು ಹೇಳಿಕೊಂಡು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸೆಟ್ಲ್ ಮಾಡಿಕೊಳ್ಳುವಂತೆ ಹಣಕ್ಕಾಗಿ ಒತ್ತಾಯಿಸುತ್ತಿರುವ ಬಗ್ಗೆ ಕೆಲವು ದೂರುಗಳು ಬಂದಿರುತ್ತವೆ.
ಆದ್ದರಿಂದ ಇನ್ನು ಮುಂದೆ ಯಾವುದೇ ವ್ಯಕ್ತಿಗಳು ಯಾರಿಗಾದರು ನಾನು ಭ್ರಷ್ಟಾಚಾರ ನಿಗ್ರಹ ದಳದಿಂದ ನಿಮ್ಮ ಮೇಲೆ ಕೇಸ್ ಆಗಿದೆ. ಅದನ್ನು ಬಗೆಹರಿಸುತ್ತೇನೆ ಅಂತಾ ಹೇಳಿ ಹಣಕ್ಕೆ ಬೇಡಿಕೆ ಇಟ್ಟರೆ ಸಾರ್ವಜನಿಕರು ಇಂತಹ ಯಾವುದೇ ಕರೆಗಳಿಗೆ ಮೋಸ ಹೋಗಬಾರದು ಮತ್ತು ಸಂಬಂಧಿಸಿದ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಎಸಿಬಿ ಪೊಲೀಸ್ ಠಾಣೆಗೆ ಸಂಪರ್ಕಿಸಿ ದೂರು ನೀಡಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳ, ಬೆಳಗಾವಿ ಉತ್ತರ ವಲಯದ ಅಧೀಕ್ಷಕರಾದ ಬಿ.ಎಸ್.ನೇಮಗೌಡ ಅವರು ತಿಳಿಸಿದ್ದಾರೆ.
***