ಬೆಳಗಾವಿ-ವೈಯಕ್ತಿಕ ದ್ವೇಷದಿಂದ ವೃದ್ಧರೊಬ್ಬರನ್ನು ಕಾರು ಹಾಯಿಸಿ ಹತ್ಯೆ ಮಾಡಿ, ರಸ್ತೆ ಅಪಘಾತವೆಂದು ಬಿಂಬಿಸಲೆಯ್ನಿಸಿದ ಆರು ಜನ ಆರೋಪಿಗಳನ್ನು ಬೆಳಗಾವಿ ನಗರ ಸಂಚಾರ ಮತ್ತು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ಮೇ 30 ರಂದು ನಗರದ ಬಿಮ್ಸ್ ಆಸ್ಪತ್ರೆ ಎದುರಿರಿನ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ಧಾರವಾಡದ ಎಸ್‌ಡಿಎಂ ಕಾಲೇಜು ಹಿಂದೆ ಸತ್ತೂರ ವನಶ್ರೀ ನಗರದ ನಿವಾಸಿ ವಿರೂಪಾಕ್ಷ ಕೊಟ್ರೆಪ್ಪ ಹರ್ಲಾಪುರ ( 60) ಮೃತಪಟ್ಟಿದ್ದರು. ವಾಹನ ಚಾಲಕ ಅಪಘಾತದ ಬಳಿಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದ. ಈ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಇದು ಅಪಘಾತವಲ್ಲ. ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣ ಸಂಬಂಧ ಶಂಕಿತ ಆರೋಪಿ ಮಹೇಶ ಸಿದ್ರಾಮ ಸುಂಕದ ( 24) ಎಂಬುವರನ್ನು ವಶಕ್ಕೆ ಪಡೆದು ವಿಚಾರಿಸಿದ ವೇಳೆ ಇದು ಪೂರ್ವ ನಿಯೋಜಿತ ಕೃತ್ಯ ಎಂಬುದು ಗೊತ್ತಾಗಿದೆ. ಬೆಳಗಾವಿಯ ಮಾಳಮಾರುತಿ ಬಡಾವಣೆಯ ಬಸವರಾಜ ಬಗವತಿ ( 50), ಕಾಂಗ್ರೆಸ್ ಕೆ.ಎಚ್ ನಿವಾಸಿಗಳಾದ ಪ್ರಕಾಶ ರಾಠೋಡ ( 41), ರವಿ ಕುಂಬರಗಿ( 28), ಸಚೀನ ಪಾಟೀಲ ( 24) ಮತ್ತು ರಾಮ ವಂಟಮುರಿ ( 28) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ರಾಮಾ ಪಾಟೀಲ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.
ಆರೋಪಿ ಬಸವರಾಜ ಬಗವತಿಯನ್ನು ಪೊಲೀಸರು ವಿಚಾರಿಸಿದ ವೇಳೆ , ವೈಯಕ್ತಿಕ ದ್ವೇಷದಿಂದ ವಿರೂಪಾಕ್ಷ ಹರ್ಲಾಪುರ ಅವರಿಗೆ ಕಾರು ಹಾಯಿಸಿ ಕೊಲೆ ಮಾಡಿ, ಕಾರನ್ನು ನಿಲ್ಲಿಸದೇ ಓಡಿಸಿಕೊಂಡು ಹೋಗಿರುವುದಾಗಿ ಹೇಳಿದ್ದಾನೆ.ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.