ಸರ್ಕಾರದ ೧೦೦ ದಿನಗಳ ಸಾಧನೆ; ಛಾಯಾಚಿತ್ರ ಪ್ರರ್ಶನ
————————————————————————-
ರಾಜ್ಯದಲ್ಲಿ ಅಭಿವೃದ್ಧಿಪರ್ವ: ಶಾಸಕ ಅನಿಲ್ ಬೆನಕೆ
ಬೆಳಗಾವಿ,
ಭೀಕರ ಪ್ರವಾಹದಂತಹ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಧೃತಿಗೆಡದೇ ನೂರು ದಿನಗಳಲ್ಲಿ ಅಭಿವೃದ್ಧಿ ಪರ್ವವನ್ನೇ ಆರಂಭಿಸಿದ್ದಾರೆ. ಸಂತ್ರಸ್ತರ ಪುನರ್ವಸತಿ ಹಾಗೂ ಅಭಿವೃದ್ಧಿ ಕೆಲಸಗಳನ್ನು ಚುರುಕುಗೊಳಿಸುವ ಮೂಲಕ ಜನಪರ ಆಡಳಿತ ನೀಡಿದ್ದಾರೆ ಎಂದು ಬೆಳಗಾವಿ (ಉತ್ತರ) ಶಾಸಕ ಅನಿಲ್ ಬೆನಕೆ ಹೇಳಿದರು.
ಪ್ರಸಕ್ತ ರಾಜ್ಯ ಸರ್ಕಾರವು ೧೦೦ ದಿನಗಳನ್ನು ಪೂರೈಸಿ ಮುನ್ನಡೆದಿದ್ದು, ಈ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಪ್ರವಾಹ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಕಾರ್ಯಗಳ ಕುರಿತು ನಗರದ ಬಸ್ ನಿಲ್ದಾಣದಲ್ಲಿ ಏರ್ಪಡಿಸಿರುವ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನವನ್ನು ಶನಿವಾರ(ಡಿ.೨೮) ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ವರ್ಷದಲ್ಲಿ ಮಾಡುವ ಅಭಿವೃದ್ಧಿ ಕಾರ್ಯಗಳನ್ನು ಕೇವಲ 100 ದಿನಗಳಲ್ಲಿ ನಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಅಭಿವೃದ್ಧಿಯೇ ಆಡಳಿತದ ಮಂತ್ರ ಎನ್ನುವ ಧ್ಯೈಯದಡಿ ನಮ್ಮ ಸರಕಾರ ಕಾರ್ಯಪ್ರವೃತ್ತವಾಗಿದ್ದು, ನೂರು ದಿನಗಳ ಕೆಲಸ ಮತ್ತು ಪ್ರವಾಹ ಸಂತ್ರಸ್ತರ ಪುರ್ವಸತಿ ಕಾರ್ಯವೇ ಇದಕ್ಕೆ ಸಾಕ್ಷಿ ಎಂದರು.
ಸರ್ಕಾರದ ಸಾಧನೆ ಬಿಂಬಿಸುವ ಛಾಯಾಚಿತ್ರ ಪ್ರದರ್ಶನವು ಮೂರು ದಿನಗಳ ಕಾಲ ನಗರದ ಬಸ್ ನಿಲ್ದಾಣದಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ವಿನ ಸಂಖ್ಯೆಯಲ್ಲಿ ವೀಕ್ಷಿಸಬೇಕು ಎಂದು ಶಾಸಕ ಅನಿಲ್ ಬೆನಕೆ ಮನವಿ ಮಾಡಿಕೊಂಡರು.
೧೦೦ ದಿನಗಳ ಪ್ರಗತಿ ವರದಿ ಬಿಡುಗಡೆ:
ಇದೇ ಸಂದರ್ಭದಲ್ಲಿ “ದಿನ ನೂರು ಸಾಧನೆ ನೂರಾರು” ೧೦೦ ದಿನಗಳ ಪ್ರಗತಿ ವರದಿ ಪುಸ್ತಕವನ್ನು ಶಾಸಕ ಅನಿಲ್ ಬೆನಕೆ ಬಿಡುಗಡೆಗೊಳಿಸಿದರು.
ಛಾಯಾಚಿತ್ರ ಪ್ರದರ್ಶನವನ್ನು ಸಂಪೂರ್ಣವಾಗಿ ವೀಕ್ಷಿಸಿದ ಅವರು, ಸರ್ಕಾರದ ಸಾಧನೆಯ ಕುರಿತು ಜನರಿಗೆ ಮಾಹಿತಿಯನ್ನು ನೀಡಲು ಪ್ರದರ್ಶನ ಸಹಕಾರಿಯಾಗಿದೆ ಎಂದರು.
ಛಾಯಾಚಿತ್ರ ಪ್ರದರ್ಶನ ಕುರಿತು ಮಾಹಿತಿ ನೀಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಪ್ರವಾಹದ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ತುರ್ತು ರಕ್ಷಣಾ ಕಾರ್ಯ ಮತ್ತು ಪರಿಹಾರ ಬಿಡುಗಡೆ ಕುರಿತ ಮಾಹಿತಿಯನ್ನು ಹಾಗೂ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.
ವಾಯವ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್.ಮುಂಜಿ ಹಾಗೂ ವಾರ್ತಾ ಇಲಾಖೆಯ ಸಿಬ್ಬಂದಿ ಅನಂತ ಪಪ್ಪು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
****