Breaking News

VTU ವಿಭಜನೆ ರಾಜಧಾನಿಯಲ್ಲಿ ಜನಪ್ರತಿನಿಧಿಗಳ ಆಕ್ರೋಶ …ಬೆಳಗಾವಿಯಲ್ಲೂ ಸಭೆ

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸುವ ರಾಜ್ಯ ಸರಕಾರದ ಬಜೆಟ್ ಪ್ರಸ್ತಾವನೆಗೆ ಎಲ್ಲ ಕ್ಷೇತ್ರಗಳ ಪ್ರಮುಖರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಕಳೆದ ರವಿವಾರ ಸರ್ವ ಕನ್ನಡ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ವಿವಿಧ ರಂಗಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ.
ವಿಟಿಯು ಉಳಿಸಿಕೊಳ್ಳಲು ವಿವಿಧ ಕಡೆಗಳಿಂದ ಪ್ರಯತ್ನಗಳು ತೀವ್ರಗತಿಯಿಂದ ನಡೆಯುತ್ತಿವೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ,ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ,ಬೈಲಹೊಂಗಲದ ಕಾಂಗ್ರೆಸ್ ಶಾಸಕ ಮಹಾಂತೇಶ ಕೌಜಲಗಿ ಮುಂತಾದವರು ಬೆಂಗಳೂರಿನಲ್ಲಿ ಪಕ್ಷಾತೀತವಾಗಿ ಶಾಸಕರ ಬೆಂಬಲ ಪಡೆಯುತ್ತಿದ್ದು ವಿಟಿಯು ವಿಭಜನೆಯನ್ನು ವಿರೋಧಿಸಿವ ಗಡಿಭಾಗದ ಜನತೆಯ ಭಾವನೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತರಲಿದ್ದಾರೆ.
ಈ ಮಧ್ಯೆ ವಿಟಿಯು ಅತ್ಯುನ್ನತ ಮಂಡಳಿಯಾದ ಕಾರ್ಯಕಾರಿ ಮಂಡಳಿಯು ಇದೇ ಫೆಬ್ರುವರಿ 20 ರಂದು ಬೆಳಗಾವಿಯಲ್ಲಿ ಸಭೆ ಸೇರಿ ವಿಭಜನೆಯನ್ನು ವಿರೋಧಿಸಿ ನಿರ್ಣಯ ಕೈಕೊಳ್ಳುವ ಸಾಧ್ಯತೆಯಿದೆ.ಇಂಥ ನಿರ್ಣಯ ಕೈಕೊಂಡಲ್ಲಿ ರಾಜ್ಯ ಸರಕಾರವೂ ಸಹ ವಿಭಜನೆ ಮಾಡುವ ತನ್ನ ಪ್ರಸ್ತಾವನೆಯನ್ನು ಕೈಬಿಡುವದು ಅನಿವಾರ್ಯವಾಗುತ್ತದೆ.ಈ ಮಂಡಳಿಯಲ್ಲಿ ಕೈಕೊಳ್ಳುವ ನಿರ್ಣಯವೇ ಅಂತಿಮವಾಗುತ್ತದೆಯೆಂದು ವಿಟಿಯು ಕಾರ್ಯಕಾರಣಿಯ ಸದಸ್ಯರೊಬ್ಬರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ವಿಟಿಯು ವಿಭಜನೆ ವಿರೋಧಿಸಿ ಬೆಳಗಾವಿಯ ಹಿರಿಯ ಸಾಹಿತಿಗಳು,ಉತ್ತರ ಕರ್ನಾಟಕ ವಿಕಾಸ ವೇದಿಕೆ ಮತ್ತಿತರ ಸಂಘಟನೆಗಳು ಸ್ವಯಂ ಸ್ಪೂರ್ತಿಯಿಂದ ಬೀದಿಗಿಳಿದಿವೆ.
ಮಾಜಿ ಸಚಿವ ಬಸವರಾಜ ರಾಯರೆಡ್ಡಿ,ಮಾಜಿ ಎಮ್.ಎಲ್.ಸಿ ಡಾ.ಎಮ್.ಪಿ.ನಾಡಗೌಡ ಅವರೂ ಸಹ ವಿಭಜನೆಯನ್ನು ವಿರೋಧಿಸಿದ್ದಾರೆ.
ವಿಟಿಯು ವಿಭಜನೆಯ ಸಂಬಂಧ ಕನ್ನಡ ಪರ ಸಂಘಟನೆಗಳ ಮುಖಂಡರಾದ ಸಿದ್ದನಗೌಡ ಪಾಟೀಲ,ಅಶೋಕ ಚಂದರಗಿ,ಮಹಾದೇವ ತಳವಾರ,ದೀಪಕ ಗುಡಗನಟ್ಟಿ,ಬಾಬೂ ಸಂಗೋಡಿ,ಯಶೋಧ ಬಿರಡಿ,ಸಾಗರ್ ಬೋರಗಲ್ಲ,ಕಸ್ತೂರಿ ಭಾವಿ ಮುಂತಾದವರು ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದು ವಿವಿಧ ಕ್ಷೇತ್ರಗಳ ಪ್ರಮುಖರನ್ನು ಸಂಪರ್ಕಿಸಿ ಹೋರಾಟಕ್ಕೆ ಬೆಂಬಲವನ್ನು ಕೋರುತ್ತಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *