Breaking News

ಈ ವಯಸ್ಸಿನಲ್ಲಿ ನಿನಗೇಕೆ ಹೆಣ್ಣು ಬೇಕೊ ಭಾಡ್ಯಾ”

ಅಶೋಕ ಚಂದರಗಿ ಅವರ ಲೇಖನ

ಬಸವರಾಜ ಕಟ್ಟೀಮನಿ ಇಳಿವಯಸ್ಸಿನಲ್ಲಿ
ಮದುವೆಯಾಗಲು “ಮಹಿಳೆಯೊಬ್ಬರ”
ಶೋಧಕ್ಕಾಗಿ ” ನಾಡೋಜ” ದಲ್ಲಿ
ಜಾಹೀರಾತು ನೀಡಿದ್ದರು!

ಮೊನ್ನೆ ಅಕ್ಟೋಬರ್ 5.ಖ್ಯಾತ
ಕಾದಂಬರಿಕಾರ, ಸಾಹಿತಿ ದಿ.ಬಸವರಾಜ
ಕಟ್ಟೀಮನಿಯವರ ಜನ್ಮದಿನ.ಸಾಮಾಜಿಕ
ಜಾಲತಾಣದಲ್ಲಿ ಅನೇಕ ಗಣ್ಯರ, ಸಾಹಿತಿಗಳ ಜನ್ಮದಿನಗಳು ವರದಿಯಾಗುತ್ತಲೇ ಇವೆ.ಪತ್ರಿಕೆಗಳಲ್ಲಿ ವರದಿಯಾಗದ
ನೂರೆಂಟು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಗೊತ್ತಾಗುತ್ತಿವೆ.
1980 ರಲ್ಲಿ ಬೆಳಗಾವಿಯಲ್ಲಿ ನಡೆದ 52ನೇ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಕಟ್ಟೀಮನಿಯವರ ಜೊತೆಗೆ ನನ್ನ ಸಂಬಂಧ ಬಂದಿದ್ದು ನಾನು ” ನಾಡೋಜ” ದಿನಪತ್ರಿಕೆಯನ್ನು 1981 ರ
ಮೇ 15 ರಂದು ಸಹಾಯಕ ಸಂಪಾದಕನಾಗು ಸೇರಿದ ನಂತರವೇ.ಪತ್ರಿಕೆಯೊಂದಿಗೆ ನಿರಂತರ ಸಂಬಂಧ ಹೊಂದಿದ್ದ ಅವರನ್ನು ಮೇಲಿಂದ ಮೇಲೆ ಭೆಟ್ಟಿಯಾಗುತ್ತಿದ್ದೆ.
ಒಂದು ದಿನ ಬೆಳಗಾವಿಯ ಡಿಸಿ
ಆವರಣದಲ್ಲಿರುವ ವಾರ್ತಾ ಇಲಾಖೆಯ ಎದುರು ಕಟ್ಟೀಮನಿಯವರು ಸಿಗರೇಟು ಸೇದುತ್ತ ನಿಂತಿದ್ದರು.ನನ್ನನ್ನು ಮಾತಿಗೆಳೆದು ಒಮ್ಮೆಲೇ ಬಿದ್ದು ಬಿದ್ದು ನಗತೊಡಗಿದರು.
ಏಕೆ ನಗುತ್ತಿದ್ದಾರೆಂದು ನನಗೆ ಗೊತ್ತಾಗಲಿಲ್ಲ.ಅವರೇ ತಿಳಿಸಿದಾಗ ನಾನೂ ನಗತೊಡಗಿದೆ!
ಕಟ್ಟೀಮನಿ ಅವರು ತಮ್ಮ ಹೆಸರು ಹಾಕದೇ ಚಿಕ್ಕ ಜಾಹೀರಾತೊಂದನ್ನು ಹಾಕಿಸಿದ್ದರು.ವೃದ್ದ ಸಾಹಿತಿಯೊಬ್ಬರು ಮದ್ವೆ ಮಾಡಿಕೊಳ್ಳಲು ಇಚ್ಛಿಸಿದ್ದು ಆಸಕ್ತ ಮಹಿಳೆ ಸಂಪರ್ಕಿಸಬಹುದು” ಎಂಬುದು ಜಾಹೀರಾತಿನ ಸಾರಾಂಶ.ನಾಡೋಜದ ಸ್ಥಿರ ದೂರವಾಣಿ ಸಂಖ್ಯೆಯನ್ನೇ ಅದರಲ್ಲಿ ಹಾಕಲಾಗಿತ್ತು.”ನನ್ನ ಹೆಸರು ಹಾಕದಿದ್ದರೂ ನಾನೇ ಎಂಬುದು ಯಾರಿಗೋ ಗೊತ್ತಾಗಿದೆ.ನನಗೆ ಒಂದು ಅಂಚೆಯ
ಮೂಲಕ ಕಾರ್ಡು ಬಂದಿದೆ.ಈ ವಯಸ್ಸಿನಲ್ಲಿ ನಿನಗೇಕೆ ಹೆಣ್ಣು ಬೇಕೊ ಭಾಡ್ಯಾ” ಎಂದು ಬರೆದಿದ್ದಾರೆ” ಎಂದು ಕಟ್ಟೀಮನಿ ಅವರು ಬಿದ್ದು ಬಿದ್ದು ನಗತೊಡಗಿದರು! ಕೊನೆಗೂ ಅವರಿಗೆ ” ಆಸಕ್ತ ಮಹಿಳೆ” ಸಿಗಲೇ ಇಲ್ಲ, ಮತ್ತೊಂದು ಮದುವೆಯೂ ಆಗಲಿಲ್ಲ!!
ನಾಡೋಜದ ಸಂಪಾದಕ ರಾಘವೇಂದ್ರ ಜೋಶಿಯವರ ತಾಯಿ ಸತ್ಯಭಾಮಾ ಜೋಶಿ ಅವರು ಪ್ರಕಾಶಕರಾಗಿದ್ದ ಹಾಗೂ ನಾನು ಸಂಪಾದಕನಾಗಿದ್ದ ” ರವಿವಾರ” ಸಾಪ್ತಾಹಿಕ 1982 ರಲ್ಲಿ ಬಂತು.ಟ್ಯಾಬ್ಲಾಯ್ಡ ಆಕಾರದ ಎಂಟು ಪುಟಗಳ ಈ ಪತ್ರಿಕೆ ಒಂಭತ್ತು ಸಂಚಿಕೆಗಳನ್ನು ಕಂಡು ನಿಂತು ಹೋಯಿತು.ಜಾಹೀರಾತು ಬೆಂಬಲವಿಲ್ಲದೇ ಪ್ರಕಟವಾಗುತ್ತಿದ್ದ ಪತ್ರಿಕೆಗೆ ಕಟ್ಟೀಮನಿ ಅವರು” ಯಮುನಾ” ಎಂಬ ಕಾದಂಬರಿ ಬರೆದು ಕಳಿಸಿದರು.
ಕಾದಂಬರಿಯ ಹಸ್ತಪ್ರತಿ ತರಲು ನಾನು ಗೋಕಾಕ ತಾಲೂಕಿನ ಮಲಾಮರಡಿಗೆ ಹೋದೆ.ಸುಲಧಾಳವರೆಗೆ ಬಸ್ಸು.ನಂತರ ಹೊಲಗಳಲ್ಲಿ ನಡೆದುಕೊಂಡೇ ಮಲಾಮರಡಿಯಲ್ಲಿನ ಕಟ್ಟೀಮನಿ ಅವರ ಮನೆ ತಲುಪುದಾಗ ಮಟಮಟ ಮಧ್ಯಾನ್ಹ 2 ಗಂಟೆ.ಕಟ್ಟೀಮನಿ ಅವರು ಊಟಕ್ಕೆ
ಕರೆದರು.ಒಂದು ಚಿಕ್ಕ ಟೇಬಲ್.ಎರಡು ಖುರ್ಚಿ.ರೊಟ್ಟಿ, ಪಲ್ಯೆ ತಿಂದಾಯಿತು.ನಾನು ಕೈತೊಳೆಯದೇ ಅನ್ನಕ್ಕಾಗಿ ಕಾದೆ.ನನ್ನನ್ನು ನೋಡಿದ ಅವರು,” ಅನ್ನ ಇಲ್ಲ” ಎಂದು ಹೇಳಿ ಕೈತೊಳೆಯಲು ತಿಳಿಸಿದರು.ಕಾದಂಬರಿಯ ಹಸ್ತಪ್ರತಿ ಪಡೆದು ಬೆಳಗಾವಿಗೆ ಮರಳಿದೆ.
1982 ರ ಮೇ ತಿಂಗಳಲ್ಲಿ ಐತಿಹಾಸಿಕ ಗೋಕಾಕ ಚಳವಳಿಯ ಕಾವು.ಬೆಳಗಾವಿಯಿಂದಲೇ ಡಾ.ರಾಜಕುಮಾರ ನೇತೃತ್ವದಲ್ಲಿ ಬೃಹತ್ ಯಾತ್ರೆ ಆರಂಭವಾಗಿದ್ದು .ಇದರ ಪೂರ್ವಭಾವಿ ಸಭೆ ನಡೆದಿದ್ದು ಬೆಳಗಾವಿಯ ಅನಂತಶಯನ ಬೀದಿಯ ಕರ್ನಾಟಕ ಸಂಘದಲ್ಲಿ.
ಧಾರವಾಡದಿಂದ ಪಾಟೀಲ ಪುಟ್ಟಪ್ಪ,ಆರ್.ಸಿ.ಹಿರೇಮಠ, ರಾ.ಯ.ಧಾರವಾಡಕರ,ಚಂಪಾ,ರಾಮ ಜಾಧವ ಜೊತೆಗೆ ಕಟ್ಟೀಮನಿಯವರೂ ಬಂದಿದ್ದರು.ಸಾವಳಗಿಯ ಜಗದ್ಗುರುಗಳೂ ತಮ್ಮ ” ಸಿಂಹಾಸನ” ವಾದ ಬೆತ್ತದ ಖುರ್ಚಿ
ಸಹಿತ ಬಂದಿದ್ದರು.ಅದರ ಉಸ್ತುವಾರಿ ಪಾಛ್ಚಾಪುರದ ಕನ್ನಡದ ಕಟ್ಟಾಳು ರೋಹಿದಾಸ ಮಠದ ಅವರದು.ಸಭೆ ನಡೆಯಿತು.ಕಟ್ಟೀಮನಿಯವರಿಗೆ ಸಿಗರೇಟಿನ ತಲಬು.ಹಚ್ಚೇ ಬಿಟ್ಟರು.ಸ್ವಾಮೀಜಿ ಎದುರು ಸಿಗರೇಟು ಸೇದುವದೆ? ಆದರೆ ಕ್ರಾಂತಿಕಾರಿ ಸಾಹಿತಿ ಎನಿಸಿದ್ದ , ” ಜರತಾರಿ
ಜಗದ್ಗುರು” ಕಾದಂಬರಿಯನ್ನೇ ಬರೆದು
ನಾಡಿನ ಮಠಗಳ ಕೆಂಗಣ್ಣಿಗೆ ಗುರಿಯಾಗಿದ್ದ ಕಟ್ಟೀಮನಿ ಅವರು ಸಿಗರೇಟು ಸೇದುತ್ತ ಮೂಗು ಬಾಯಲ್ಲಿ ಹೊಗೆ ಬಿಡುವದನ್ನು ಬಿಟ್ಟು ಕೊಡಲಿಲ್ಲ!
1985 ರ ವಿಧಾನ ಸಭೆ ಚುನಾವಣೆ.ಬೆಳಗಾವಿ ತಾಲೂಕಿನ ಬಾಗೇವಾಡಿ ಮತಕ್ಷೇತ್ರದಿಂದ ಜನತಾ ಪಕ್ಷದಿಂದ ಕಣಕ್ಕಿಳಿಯಲು ಬಯಸಿದ ಕಟ್ಟೀಮನಿ ಅವರು ಪ್ರದೇಶ ಜನತಾ ಪಕ್ಷದ್ಸ್ ಅಧ್ಯಕ್ಷ ದೇವೇಗೌಡರನ್ನು ಭೆಟ್ಟಿಯಾಗಲು ಬೆಂಗಳೂರಿಗೆ ಹೋಗಿದ್ದರು.ಬೆಳಗಾವಿ ಜಿಲ್ಲಾ ಜನತಾ ಪಕ್ಷದ ಅಧ್ಯಕ್ಷ ದಿ.ರಾಮಭಾವೂ ಪೋತದಾರ ಅವರ ಬಳಿ ಖಾಲಿ ಬಿ ಫಾರ್ಮ ಕೊಟ್ಟಿದ್ದಾಗಿ ಗೌಡರು ಹೇಳಿ ಕಳಿಸಿಬಿಟ್ಟರು.
ಕನ್ನಡದ ಕಟ್ಟಾಳು ಸಾಹಿತಿಯಾಗಿದ್ದ ಕಟ್ಟೀಮನಿಯವರಿಗೆ ಪೋತದಾರರು ಹೇಗೆ ಟಿಕೆಟ್ ಕೊಟ್ಟಾರು? ಆದರೆ ಕೊನೆಯವರೆಗೂ ಕಟ್ಟೀಮನಿಯವರಿಗೆ ಜನತಾ ಪಕ್ಷದ ನಾಯಕರು ಆಸೆ ತೋರಿಸಿ ಕೈಕೊಟ್ಟರು.ನಾಮಪತ್ರ ತುಂಬುವ ತಯಾರಿಯಿಂದಲೇ ಕಟ್ಟೀಮನಿ ಅವರು ಬೆಳಗಾವಿ ತಹಸಿಲ್ದಾರ ಕಚೇರಿಯ ಮುಂಭಾಗದ ಕಟ್ಟೆಯ ಮೇಲೆ ಬಂದು ಕುಳಿತರು.ಆದರೆ ಬಿ ಫಾರ್ಮ ಸಿಕ್ಕಿದ್ದು ಎಸ್.ಸಿ.ಮಾಳಗಿಯವರಿಗೆ!
1968 ರಲ್ಲಿ ರಾಜ್ಯ ವಿಧಾನ ಪರಿಷತ್ತಿಗೆ ನಾಮಕರಣಗೊಂಡಿದ್ದ ಕಟ್ಟೀಮನಿ ಅವರು ರಾಜಕೀಯದ ರುಚಿ ನೋಡಿದ್ದರು.ಮತ್ತೊಮ್ನೆ ಶಾಸನ ಸಭೆಯನ್ನು ಪ್ರವೇಶಿಸಲು
ಇಚ್ಛಿಸಿದ್ದರು.ಆದರೆ ಅವರ ಇಚ್ಛೆ
ಈಡೇರಲಿಲ್ಲ.
ಅಶೋಕ ಚಂದರಗಿ
ಅಧ್ಯಕ್ಷರು, ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ
ಸಮಿತಿ ಹಾಗೂ ಪತ್ರಕರ್ತರು
ಬೆಳಗಾವಿ ಮೊ:9620114466

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *