ಬೆಳಗಾವಿ: ರಾಜ್ಯದ ಪವರ್ ಫುಲ್ ಪಾಲಿಟಿಕಲ್ ಸೆಂಟರ್ ಆಗಿರುವ ಬೆಳಗಾವಿಯಲ್ಲಿ ಅಧಿವೇಶನ ಸಂದರ್ಭದಲ್ಲೂ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.ಪರಿಷತ್ತಿನ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಳಿಕ ಬೆಳಗಾವಿ ಕಾಂಗ್ರೆಸ್ ಪಡೆ ಫುಲ್ ಜೋಶ್ ನಲ್ಲಿದೆ.
ವಿಧಾನ ಪರಿಷತ್ ಚುನಾವಣೆ ಮುಗಿದ ನಂತರ ಹಲವಾರು ನಾಯಕರು ಪಕ್ಷಾಂತರಕ್ಕೆ ಮುಂದಾಗಿದ್ದಾರೆ. ಕಳೆದ ಮಂಗಳವಾರ ಅಷ್ಟೇ ಜೆಡಿಎಸ್ ನಾಯಕ ಕೋನರೆಡ್ಡಿ ಆ ಪಕ್ಷ ತೊರೆದು, ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಈಗ ಗೋಕಾಕದ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಕಾಂಗ್ರೆಸ್ ಸೇರುತ್ತಿದ್ದಾರೆ.
ಇಂದು ಸಂಜೆ ನಗರದ ಕಾಂಗ್ರೆಸ್ ಭವನದಲ್ಲಿ ನಡೆಯುವ ಸಮಾರಂಭದಲ್ಲಿ,ಸಾವಿರಾರು ಬೆಂಬಲಿಗರ ಜೊತೆ, ಅಧಿಕೃತವಾಗಿ ಅಶೋಕ ಪೂಜಾರಿ, ಕೈಪಡೆಗೆ ಎಂಟ್ರಿ ಕೊಡಲಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರ ನೇತೃತ್ವದಲ್ಲೇ ಗೋಕಾಕದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಜಾರಕಿಹೊಳಿ ಸಹೋದರರ ಕದನ ರಾಜ್ಯಮಟ್ಟದಲ್ಲಿ ಗಮನಸೆಳೆದಿತ್ತು. ಮುಂಬರುವ ಗೋಕಾಕ ವಿಧಾನಸಭೆ ಚುನಾವಣೆಯಲ್ಲಿ,ಅಶೋಕ ಪೂಜಾರಿ ಅವರ ಕಾಂಗ್ರೆಸ್ ಸೇರ್ಪಡೆ, ಸಹೋದರರ ಮತ್ತೊಂದು ಕದನಕ್ಕೆ ಸಾಕ್ಷಿಯಾಗಲಿದೆ.
ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಗೆಲುವು, ಕಾಂಗ್ರೆಸ್ ಗೆ ಭೀಮ ಬಲ ನೀಡಿದೆ .ಚುನಾವಣೆಯ ನಂತರ ಬಹಳಷ್ಟು ಜನ ನಾಯಕರು ಕಾಂಗ್ರೆಸ್ ಪಾರ್ಟಿಯತ್ತ ಮುಖ ಮಾಡಿದ್ದು, ಮಾಜಿ ಸಂಸದ ರಮೇಶ್ ಕತ್ತಿ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ದೆ ಮಾಡುತ್ತಾರೆ ಎನ್ನುವ ಸುದ್ದಿ ಹರದಾಡುತ್ತಿದೆ.