Breaking News

ಕೋಟಿ,ಕೋಟಿ ಖರ್ಚು ಮಾಡಿ ಕಟ್ಟಿದ, ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಓಪನಿಂಗ್ ಮಾಡಿದ ಸಿಎಂ

ಬೆಳಗಾವಿಯಲ್ಲಿ 16.50 ಕೋಟಿ ವೆಚ್ಚದ ಕ್ರೀಡಾ ಸಮುಚ್ಚಯಗಳ ಲೋಕಾರ್ಪಣೆ*

ಬೆಳಗಾವಿ, ಡಿ.21: ಬೆಳಗಾವಿ ನಗರದಲ್ಲಿ ಸುಮಾರು 16.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕ್ರೀಡಾ ಸಮುಚ್ಚಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಚಾಲನೆ ನೀಡಿದರು.

2 ಎಕರೆ 14 ಗುಂಟೆ ಜಾಗದಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು ಮಹಿಳಾ ಕ್ರೀಡಾ ವಸತಿ ನಿಲಯ ನಿರ್ಮಿಸಲಾಗಿದ್ದು, ಸುಮಾರು 16.50 ಕೋಟಿ ವೆಚ್ಚ ಮಾಡಲಾಗಿದೆ. ಬೆಳಗಾವಿ ಕ್ರೀಡಾ ವಸತಿ ನಿಲಯದಲ್ಲಿ ಕುಸ್ತಿ, ಜುಡೋ, ವಾಲಿಬಾಲ್, ಅಥ್ಲೆಟಿಕ್ ಮತ್ತು ಸೈಕ್ಲಿಂಗ್‌ಗೆ ತರಬೇತಿ ನೀಡಲಾಗುತ್ತಿದೆ. ಒಳಾಂಗಣ ಕ್ರೀಡಾಂಗಣದ ಕಟ್ಟಡದಲ್ಲಿ
ಅಂತರಾಷ್ಟ್ರೀಯ ಗುಣಮಟ್ಟದ ಉಪಕರಣಗಳುಳ್ಳ ಜಿಮ್ ಹಾಲ್, ಜುಡೋ ಹಾಲ್, ಕುಸ್ತಿ ಅಂಕಣಗಳನ್ನು ನಿರ್ಮಿಸಲಾಗಿದ್ದು ಅತ್ಯಾಧುನಿಕ ವ್ಯವಸ್ಥೆ ಒದಗಿಸಲಾಗಿದೆ.
ಸುಮಾರು 2.19 ಕೋಟಿ ವೆಚ್ಚದಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಕ್ರೀಡೆಗೆ ಪ್ರೋತ್ಸಾಹ ನೀಡಬೇಕು. ಈ ಭಾಗದ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ಸಿಗಬೇಕು ಅನ್ನೋ ದೃಷ್ಟಿಯಿಂದ ಸೌಲಭ್ಯ ಒದಗಿಸಲಾಗಿದೆ. ಸುಮಾರು ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನ ತ್ವರಿತವಾಗಿ ಪೂರ್ಣಗೊಳಿಸಿ ಇಂದು ಲೋಕಾರ್ಪಣೆಗೊಳಿಸಲಾಯಿತು.

ಬೆಳಗಾವಿ ಜಿಲ್ಲೆಯಾದ್ಯಂತ ಹಲವು ಕ್ರೀಡಾ ಯೋಜನೆಗಳನ್ನು ರೂಪಿಸಲಾಗಿದೆ. ಬೈಲಹೊಂಗಲ ಪಟ್ಟಣದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 2 ಕೋಟಿ ಅನುದಾನ ನೀಡಲಾಗಿದ್ದು, 50 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಸವದತ್ತಿ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ 1 ಕೋಟಿ ಹಣ ನೀಡಲಾಗಿದೆ. ಅಲ್ಲದೇ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಗರಡಿ‌ ಮನೆಗಳ ನಿರ್ಮಾಣ ಹಾಗೂ ವ್ಯಾಯಾಮ ಸಾಮಾಗ್ರಿಗಳ ಪೂರೈಕೆಗಾಗಿ 5 ಕೋಟಿ ಅನುದಾನ ನೀಡಲಾಗಿದ್ದು, ಇದರಲ್ಲಿ ಮೂರೂವರೆ ಕೋಟಿ ಹಣ ಬಿಡುಗಡೆ ಮಾಡಲಾಗಿದೆ.

ಬೆಳಗಾವಿ ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿರುವ ಹಲವರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಭಾಗದ ಪ್ರತಿಭಾನ್ವಿತ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಬೇಕೆಂಬ ಸದುದ್ದೇಶದಿಂದ ಅತ್ಯಾಧುನಿಕ ವ್ಯವಸ್ಥೆಯುಳ್ಳ ಕ್ರೀಡಾ ಸಮುಚ್ಚಯ ನಿರ್ಮಿಸಲಾಗಿದ್ದು, ಇದರಿಂದ ಕ್ರೀಡಾಪಟುಗಳಿಗೆ ಅನುಕೂಲ ಆಗಲಿದೆ. ಮುಂದಿನ ಒಲಂಪಿಕ್‌ನಲ್ಲಿ ಕರ್ನಾಟಕದಿಂದ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಿ, ಪದಕಗಳನ್ನು ಗೆಲ್ಲಬೇಕು. ಆ ನಿಟ್ಟಿನಲ್ಲಿ ಅಮೃತ ಕ್ರೀಡಾ ದತ್ತು ಯೋಜನೆಯಲ್ಲಿ 75 ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆಂಬ ಕನಸು ಹೊಂದಿದ್ದು, ಆ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.

*ದಿ.ಸುರೇಶ್ ಅಂಗಡಿಯವರನ್ನು ಸ್ಮರಿಸಿದ ಸಚಿವ ಡಾ.ನಾರಾಯಣಗೌಡ*

ಈ ಒಳಾಂಗಣ ಕ್ರೀಡಾಂಗಣ ಮತ್ತು ಮಹಿಳಾ ಕ್ರೀಡಾಪಟುಗಳ ವಸತಿ ನಿರ್ಮಾಣದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸುವಲ್ಲಿ ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿಯವರ ಪಾತ್ರ ಮಹತ್ವದ್ದಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಸ್ಮರಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ್, ಸ್ಥಳೀಯ ಶಾಸಕರಾದ ಅನಿಲ್ ಬೆನಕೆ ಸೇರಿ ಹಲವರು ಪಾಲ್ಗೊಂಡಿದ್ದರು.

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.