Home / Breaking News / ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್
ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ, -: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ.07 ರಂದು ನಡೆಯಲಿದ್ದು, ಸುಗಮ‌ ಮತ್ತು ಶಾಂತಿಯುತ ಮತದಾನ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು‌ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರವಿವಾರ (ಮೇ.05) ನಡೆದ ಪತ್ರಿಕಾಗೋಷ್ಠಿಯಲ್ಲಿ ಮೆ.07 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಸಿದ್ಧತೆ ಕುರಿತು ಮಾಹಿತಿ ನೀಡಿದರು.

02-ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ 957559 ಪುರುಷ ಮತದಾರರು, 966134 ಮಹಿಳೆಯರು, 95 ಇತರೆ ಸೇರಿದಂತೆ 1923788 ಮತದಾರರಿದ್ದಾರೆ. ಅದೇ ರೀತಿಯಲ್ಲಿ 01-ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ 885200 ಪುರಷರು, 876414 ಮಹಿಳೆಯರು ಹಾಗೂ 80 ಇತರೆ ಮತದಾರರು ಸೇರಿದಂತೆ ಒಟ್ಟು 1761694 ಮತದಾರರಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 2055870 ಪುರುಷ ಮತದಾರರು, 2049169 ಮಹಿಳಾ ಮತದಾರರು ಹಾಗೂ 186 ಇತರೆ ಮತದಾರರು ಸೇರಿದಂತೆ ಒಟ್ಟು 4105225 ಮತದಾರರಿದ್ದಾರೆ.

ಭಾರತ ಚುನಾವಣಾ ಆಯೋಗದ ಅನುಮೋದಿಸಿರುವಂತೆ ಮತದಾರರು ತಮ್ಮ ಮತ ಚಲಾಯಿಸುವ ಮೊದಲು ಮತದಾನ ಕೇಂದ್ರಗಳಲ್ಲಿ ಅವರ ಗುರುತಿಗಾಗಿ ಮತದಾರರ ಗುರುತಿಸಿ ಚೀಟಿ ತೋರಿಸಿ ಮತದಾನ ಮಾಡಬಹುದಾಗಿದೆ. ಮತದಾನದ ದಿನದಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಮತದಾನದ ದಿನದಂದು ರಜೆಯ ಘೋಷಣೆ/ಪಾವತಿಸಿದ ರಜೆ:

ಲೋಕಸಭಾ ಕ್ಷೇತ್ರಗಳ ಅಡಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳು (ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ) ಮತ್ತು ಸಾರ್ವಜನಿಕ ವಲಯದ ಉದ್ಯಮಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ. ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ, ವ್ಯಾಪಾರ ಉದ್ಯಮಗಳು ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅಧಿಕಾರಿ/ಸಿಬ್ಬಂದಿಗಳು ಅಥವಾ ದಿನಗೂಲಿ ವೇತನದಲ್ಲಿ ಕೆಲಸ ಮಾಡುವ ಮತದಾರರು ತಮ್ಮ ಮತ ಚಲಾಯಿಸಲು ಅನುವು ಮಾಡಿಕೊಡಲು ಆರ್‌ಪಿ ಕಾಯ್ದೆ 1951 ರ ಸೆಕ್ಷನ್ 135 ಬಿ ಪ್ರಕಾರ ಪಾವತಿಸಿದ ರಜೆಯನ್ನು ಮಂಜೂರು ಮಾಡಲು ಆದೇಶಿಸಿದೆ.

ಕಾನೂನುಬಾಹಿರ ಸಭೆಗಳನ್ನು ನಿಷೇಧಿಸಲಾಗಿದೆ ಮತ್ತು ಮತದಾನದ ಮುಕ್ತಾಯಕ್ಕೆ ನಿಗದಿಪಡಿಸಿದ ಗಂಟೆಯೊಂದಿಗೆ ಕೊನೆಗೊಳ್ಳುವ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸುವ ಬಗ್ಗೆ ಆದೇಶಗಳನ್ನು ನೀಡಲಾಗಿದೆ. ಇದು ಚುನಾವಣೆ ನಡೆಯುವ ಪ್ರದೇಶ/ಸಂಪೂರ್ಣ ಕ್ಷೇತ್ರಕ, ಅನ್ವಯಿಸುತ್ತದೆ.

ಮಧ್ಯಪಾನ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ರಾಜಕೀಯ ಪ್ರಚಾರಕ್ಕಾಗಿ ಮತದಾನದ ಮುಕ್ತಾಯದ ಸಮಯದೊಂದಿಗೆ ಕೊನೆಗೊಳ್ಳುವ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ಧ್ವನಿವರ್ಧಕವನ್ನು ಬಳಸಲು ನಿರ್ಬಂಧಿಸಲಾಗಿದೆ.

ಲೋಕಸಭಾ ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಚಾರದ ಅವಧಿ ಮುಗಿದ ನಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಪ್ರಚಾರ ನಡೆಸುವಂತಿಲ್ಲ, ಕ್ಷೇತ್ರದ ಹೊರಗಿನಿಂದ ಕರೆತಂದಿರುವ ರಾಜಕೀಯ ಕಾರ್ಯಕರ್ತರು/ ಪಕ್ಷದ ಕಾರ್ಯಕರ್ತರು/ ಮೆರವಣಿಗೆ/ ಪದಾಧಿಕಾರಿಗಳು/ ಪ್ರಚಾರ-ಕಾರ್ಯಕರ್ತರು ಮುಂತಾದವರು ಸೇರಿದಂತೆ ಆ ಕ್ಷೇತ್ರದ ಮತದಾರರಲ್ಲದ ರಾಜಕೀಯ ವ್ಯಕ್ತಿಗಳು ಕ್ಷೇತ್ರವನ್ನು ತೊರೆಯಬೇಕು.
ಆಯೋಗದ ನಿರ್ದೇಶನಗಳ ಪ್ರಕಾರ; ಮೇಲಿನ ಸೂಚನೆಗಳನ್ನು ಕೈಗೊಳ್ಳಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು, ಚುನಾವಣಾ ಆಡಳಿತ/ಪೊಲೀಸ್ ಆಡಳಿತವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.

ಕಲ್ಯಾಣ ಮಂಟಪಗಳು / ಸಮುದಾಯ ಭವನಗಳು ಇತ್ಯಾದಿಗಳನ್ನು ಪರಿಶೀಲಿಸುವುದು, ಈ ಆವರಣದಲ್ಲಿ ಯಾರಾದರೂ ಹೊರಗಿನವರಿಗೆ ವಸತಿ ಕಲ್ಪಿಸಲಾಗಿದೆಯೇ ಎಂದು ಪರಿಶೀಲಿಸಲು ಸೂಚಿಸಲಾಗಿದೆ. ಕ್ಷೇತ್ರದ ಗಡಿಗಳಲ್ಲಿ ಚೆಕ್ ಪೋಸ್ಟಗಳನ್ನು ಸ್ಥಾಪಿಸಿ ಕ್ಷೇತ್ರದ ಹೊರಗಿನಿಂದ ಬರುವ ವಾಹನಗಳ ಚಲನವಲನದ ನಿಗಾವಹಿಸಲಾಗಿದೆ.
ಆಯಾ ಕ್ಷೇತ್ರದ ಮತದಾರರೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತಿದೆ.

ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ಚುನಾವಣಾ ಸಮೀಕ್ಷೆಗಳು ಸೇರಿದಂತೆ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ರೀತಿಯ ಸಮೀಕ್ಷೆಗಳನ್ನು ಮಾಡಬಾರದು ಎಂದು ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳಿಗೆ ತಿಳಿಸಲಾಗಿದೆ.

ಚುನಾವಣೆ ಕುರಿತು ಜನಾಭಿಪ್ರಾಯ ಸಂಗ್ರಹ, ಫಲಿತಾಂಶಗಳು ಅಥವಾ ಯಾವುದೇ ಇತರೆ ರೀತಿಯ ಸಮೀಕ್ಷೆಯ ಫಲಿತಾಂಶಗಳು ಸೇರಿದಂತೆ ಯಾವುದೇ ಚುನಾವಣಾ ವಿಷಯವನ್ನು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರದರ್ಶಿಸುವುದು/ಪ್ರಕಟಿಸುವುದನ್ನು ದೇಶದಲ್ಲಿ ನಡೆಯುತ್ತಿರುವ ಒಟ್ಟು 7 ಹಂತಗಳ ಮತದಾನ ಮುಗಿಯುವವರೆಗೆ ನಿಷೇಧಿಸಲಾಗಿದೆ.

ಮತಗಟ್ಟೆಗಳಲ್ಲಿ ಬಿಸಿಲಿನ ತಾಪವನ್ನು ನೀಗಿಸಲು ಮತದಾರರಿಗೆ ಅನುಕೂಲವಾಗುವಂತೆ ಕ್ರಮ;

ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್, ಪೀಠೋಪಕರಣಗಳು ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮತ್ತು ಮತದಾರರಿಗೆ ಸಹಾಯವಾಗಲು ಸಂಕೇತ ಫಲಕಗಳನ್ನು ಅಳವಡಿಸಲಾಗಿದೆ. ಮತಗಟ್ಟೆಯ ಅಕ್ಕಪಕ್ಕದ ಕೊಠಡಿಗಳನ್ನು ವಿಶ್ರಾಂತಿ ಕೊಠಡಿಗಳನ್ನಾಗಿ ಸಿದ್ಧವಿರಿಸಲಾಗಿದೆ. ಮತಗಟ್ಟೆ ಆವರಣದಲ್ಲಿ ಶೂಶೂಷಕರು/ಆಶಾ ಕಾರ್ಯಕರ್ತರೊಂದಿಗೆ ವೈದ್ಯಕೀಯ ಕಿಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆಯ ಸೌಲಭ್ಯವಿರುತ್ತದೆ.

ಮುದ್ರಣ ಮಾಧ್ಯಮಕ್ಕಾಗಿ ರಾಜಕೀಯ ಜಾಹೀರಾತಿನ ಪೂರ್ವ-ಪ್ರಮಾಣೀಕರಣ:

ರಾಜ್ಯ ಮಟ್ಟದಲ್ಲಿ ಪಕ್ಷಗಳು/ಜಿಲ್ಲಾ ಮಟ್ಟದಲ್ಲಿ ಅಭ್ಯರ್ಥಿಗಳು ಆಯಾ ಎಂಸಿಎಂಸಿ ಸಮಿತಿಯ ಪೂರ್ವ ಪಮಾಣೀಕರಣವಿಲ್ಲದೆ ಮತದಾನದ ದಿನ ಮತ್ತು ಚುನಾವಣಾ ಪೂರ್ವ ದಿನದಂದು ಮುದ್ರಣ ಮಾಧ್ಯಮದಲ್ಲಿ ಯಾವುದೇ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸುವುದನ್ನು ಭಾರತ ಚುನಾವಣಾ ಆಯೋಗ ನಿರ್ಬಂಧಿಸಿದೆ ಎಂದು ತಿಳಿಸಿದರು.

ಮತದಾನ ಕೇಂದ್ರದಿಂದ 200 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಚುನಾವಣಾ ಬೂತ್‌ಗಳನ್ನು ಸ್ಥಾಪಿಸಿದಂತೆ ಸೂಚನೆ ನೀಡಲಾಗಿದೆ. ಒಂದೇ ಕಟ್ಟಡ/ ಸ್ಥಳ ಅಥವಾ ಆವರಣದಲ್ಲಿ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಿದ್ದರೂ ಸಹ, ಅಂತಹ ಆವರಣದಿಂದ 200 ಮೀಟರ್‌ಗಳಷ್ಟು ದೂರದಲ್ಲಿ ಅಭ್ಯರ್ಥಿಗಳು ತಮ್ಮ ಪಕ್ಷಗಳ ತಾತ್ಕಾಲಿಕ ಕಚೇರಿಗಳನ್ನು ತೆರೆಯಲು ಅವಕಾಶವಿದೆ.

ಮತದಾನ ಕೇಂದ್ರದ ಆವರಣದ 200 ಮೀಟರ್ ಹೊರಗಿನ ಜಾಗದಲ್ಲಿ ನೆರಳಿಗಾಗಿ ತಾತ್ಕಾಲಿಕ ಟೆಂಟ್ ಹಾಕಿಕೊಳ್ಳಬಹುದಾಗಿದೆ. ಪ್ರತಿ ಬೂತ್‌ಗಳಲ್ಲಿ ಕೇವಲ ಒಂದು ಟೇಬಲ್ ಮತ್ತು ಎರಡು ಕುರ್ಚಿಗಳನ್ನು ಮಾತ್ರ ಹಾಕಲು ಅವಕಾಶವಿದೆ. ಮತದಾನದ ದಿನಾಂಕದಂದು ಮತಗಟ್ಟೆಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿ ಯಾವುದೇ ಚುನಾವಣಾ ಪ್ರಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಡಿಸಿಪಿ ರೋಹನ್ ಜಗದೀಶ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಶುಭಂ ಶುಕ್ಲಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
***

Check Also

ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅರೆಸ್ಟ್…..

ಬೆಳಗಾವಿ- ಮಹಿಳೆಯ ಕಿಡ್ನ್ಯಾಪ್ ಕೇಸ್ ನಲ್ಲಿ ಎ ಒನ್ ಆರೋಪಿಯಾಗಿಯಾಗಿರುವ ಜೆಡಿಎಸ್ ಶಾಸಕ ಹೆಚ್ ಡಿ.ರೇವಣ್ಣ ಅವರನ್ನು ಎಸ್ ಐ …

Leave a Reply

Your email address will not be published. Required fields are marked *