Breaking News

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಲ್ಲರಿಗೂ ಆದರ್ಶವಾಗಲಿ- ಸಿಎಂ

ಬೆಳಗಾವಿ-:ವಿಶ್ವವಿದ್ಯಾಲಯಗಳು ವಿದ್ಯಾರ್ಜನೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು. ಇದು ಜ್ಞಾನದ ಶತಮಾನವಾಗಿದೆ. ಜಗತ್ತಿನ ಶಕ್ತಿಯು ಜ್ಞಾನದ ಕಡೆಗೆ ವಾಲುತ್ತಿದೆ. ವಿಶ್ವವಿದ್ಯಾಲಯಗಳು ಇದನ್ನು ಅರಿತುಕೊಂಡು ಶಿಕ್ಷಣ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು.

ಹಿರೇಬಾಗೇವಾಡಿಯ ಮಲ್ಲಪ್ಪನ ಗುಡ್ಡದ ಹೊಸ ನಿವೇಶನದಲ್ಲಿ 126 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕಟ್ಟಡಗಳ ನಿರ್ಮಾಣಕ್ಕೆ ಬುಧವಾರ (ಡಿ.22) ಭೂಮಿಪೂಜೆ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಎರಡನೇ ಹಂತದ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಿವಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಬದ್ಧತೆ ಸಿಪಾಯಿಯಿಂದ ಹಿಡಿದು ಕುಲಪತಿಗಳವರೆಗೆ ಎಲ್ಲರಿಗೂ ಇರಬೇಕು. ವಿವಿಗಳು ವಿಭಿನ್ನವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಎಲ್ಲ ಕ್ಷೇತ್ರದಲ್ಲಿ ಸಾಧನೆಗೈಯಬೇಕು.

ಹೊಸ ಪ್ರಯೋಗಗಳು ವಿಶ್ವವಿದ್ಯಾಲಯದಲ್ಲಿ ಆಗಬೇಕು. ಊಹೆಗೂ ನಿಲುಕದಂತಹ ತಾಂತ್ರಿಕ ಮತ್ತು ವೈಜ್ಞಾನಿಕ ಬದಲಾವಣೆಗಳಾಗುತ್ತಿವೆ. ಇದಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯ ಬದಲಾಗುವ ಮೂಲಕ ಆವಿಷ್ಕಾರದ ಕೇಂದ್ರವಾಗಬೇಕು.

ಶಿಕ್ಷಣ ಕ್ಷೇತ್ರದ ಆಮೂಲಾಗ್ರ ಬದಲಾವಣೆ ತರಬೇಕಾದರೆ ಅದು ವಿಶ್ವವಿದ್ಯಾಲಯದ ಮೂಲಕ ಮಾತ್ ಸಾಧ್ಯವಿದೆ. ಈ ಹೊಣೆಗಾರಿಕೆಯನ್ನು ಅರಿತುಕೊಂಡು ವಿಶ್ವವಿದ್ಯಾಲಯದಲ್ಲಿ ಆವಿಷ್ಕಾರಗಳನ್ನು ಕೈಗೊಳ್ಳಬೇಕು.

ಸತ್ವಯುತ ಸಂಶೋಧನೆಗೆ ಸಿಎಂ ಸಲಹೆ:

ಯುವಸಮುದಾಯಕ್ಕೆ ಜ್ಞಾನ ಹಾಗೂ ಆತ್ಮವಿಶ್ವಾಸದ ಬಲ ನೀಡಲು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಪ್ರಾಧ್ಯಾಪಕರು ವಿಶ್ವವಿದ್ಯಾಲಯಗಳ ಕ್ಲಾಸ್ ರೂಮ್ ಗಳಿಂದ ಹೊರಬಂದು ತಮ್ಮ ಸಂಶೋಧನೆಯನ್ನು ಒರೆಗೆ ಹಚ್ಚಬೇಕು. ಸತ್ವಯುತವಾದ ಸಂಶೋಧನೆ ಎಂದಿಗೂ ಉಳಿದುಕೊಳ್ಳುತ್ತದೆ. ಆದ್ದರಿಂದ ಸತ್ವಯುತ‌ ಹಾಗೂ ಜನೋಪಯೋಗಿ ಸಂಶೋಧನೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣದಲ್ಲಿ ಸಮರ್ಥ‌ ನಾಯಕತ್ವ ಅತೀ ಮುಖ್ಯವಾಗಿದೆ. ವಿಶ್ವವಿದ್ಯಾಲಯದ ಕುಲಪತಿಗಳು ಇಂತಹ ನಾಯಕತ್ವ ವಹಿಸಿಕೊಂಡು ಮುನ್ನಡೆಯಬೇಕು. ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ಸರಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದರು.

ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಪಿ.ಎಚ್‌ಡಿ ಗಳ ವಿಶ್ಲೇಷಣೆ ಆಗಬೇಕು. ಅವುಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಕೂಡ ಅಧ್ಯಯನ ನಡೆಸಬೇಕು ಎಂದು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ರಾಚವಿ ಆದರ್ಶ ವಿವಿ ಆಗಲಿ; ಸಿಎಂ‌ ಆಶಯ:

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಆದರ್ಶ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಲಿ ಎಂದು ಆಶಯ ವ್ಯಕ್ತಪಡಿಸಿದರು.
ರಸ್ತೆ, ನೀರು ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಲಿದೆ. ಒಂದು ವರ್ಷದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು.
ವಿವಿಯ ಪ್ರತಿ ಕೊಠಡಿಯು ಡಿಜಿಟಲೀಕರಣ ಆಗಬೇಕು. ತಾರ್ಕಿಕ ಚಿಂತನೆಯನ್ನು ಬೆಳೆಸಿಕೊಂಡು ಪ್ರಶ್ನೆಗಳನ್ನು ಕೇಳುವ ಧೈರ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿವಿ ಸ್ಥಾಪನೆಯಿಂದ ಕುಡಿಯುವ ನೀರಿನ ಯೋಜನೆಗೆ ಸ್ವಲ್ಪಮಟ್ಟಿಗೆ ತೊಂದರೆಯಾಗಿದೆ. ಆದ್ದರಿಂದ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.

 

ಉತ್ಕೃಷ್ಟ ಶಿಕ್ಷಣ ಒದಗಿಸಲು ಸರಕಾರ ಬದ್ಧ:

ಉನ್ನತ ಶಿಕ್ಷಣ ಇಲಾಖೆಯ ಸಚಿವರಾದ ಡಾ.ಅಶ್ವತ್ಥನಾರಾಯಣ ಸಿ.ಎನ್., ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಒದಗಿಸುವ ಉದ್ಧೇಶದಿಂದ ವಿಶ್ವವಿದ್ಯಾಲಯಕ್ಕೆ ಭೂಮಿ ಒದಗಿಸಲಾಗಿದೆ ಎಂದರು.

ಉತ್ತಮ ಶಿಕ್ಷಣ, ಕೌಶಲ್ಯ , ತಂತ್ರಜ್ಞಾನವನ್ನು ಒದಗಿಸುವ ಮೂಲಕ ಯುವ ಸಮುದಾಯವನ್ನು ಸ್ವಾವಲಂಬಿ ಮತ್ತು ಉತ್ತಮ ಬದುಕು ಕಟ್ಟಿಕೊಳ್ಳಲು ಸರಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ.
ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟವನ್ನು ಇನ್ನಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಸರಕಾರ ಎಲ್ಲಾ ಸೌಲಭ್ಯ ಒದಗಿಸಲಿದೆ.
ಈ ಭಾಗದ ಸವಾಲು ಮತ್ತು ಸಮಸ್ಯೆಗಳನ್ನು ಅರಿತುಕೊಂಡು ಅವುಗಳ ನಿವಾರಣೆಗಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಬೇಕು ಎಂಬ ನಿರೀಕ್ಷೆಯನ್ನು ಸರಕಾರ ಹೊಂದಿದೆ ಎಂದು ತಿಳಿಸಿದರು.

ಸದ್ಯಕ್ಕೆ ಎಂಟು ಸಾವಿರ ಪೈಕಿ ಈಗಾಗಲೇ ಎರಡು ಸಾವಿರ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗಿದೆ. ಉಳಿದ ಆರು ಸಾವಿರ ಕ್ಲಾಸ್ ಗಳನ್ನು ಸ್ಮಾರ್ಟ್ ಕ್ಲಾಸ್ ಗಳನ್ನಾಗಿ ಪರಿವರ್ತಿಸುವ ಕೆಲಸ ಮಾಡಲಾಗುವುದು.
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಸಬಲೀಕರಣ, ಸ್ವಾಯತ್ತತೆಯನ್ನು ಒದಗಿಸುವ ಮೂಲಕ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಉತ್ಕೃಷ್ಟ ಮತ್ತು ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುವುದು ಎಂದು ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಸೂಪರ್ ಥರ್ಟಿ ಯೋಜನೆ ಮೂಲಕ ಮುಂದಿನ ಒಂದು‌ ವರ್ಷದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆಯನ್ನು ನೀಡಿದರು.
ಸಮಗ್ರ, ಸದೃಢ ಕರ್ನಾಟಕ ಕಟ್ಟಲು ಶಿಕ್ಷಣವೇ ಬುನಾದಿಯಾಗಿದೆ. ಆದ್ದರಿಂದ ಶಿಕ್ಷಣ ಮತ್ತು ಎಲ್ಲರಿಗೂ ಉದ್ಯೋಗ ನೀಡುವ ಪ್ರಯತ್ನವನ್ನು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಮಾಡುತ್ತಿದೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಜರಾಯಿ, ಹಜ್ ಹಾಗೂ ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ಮತ್ತು ತಂತ್ರಜ್ಞಾನಾಧಾರಿತ ಶಿಕ್ಷಣದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಮನವಿ:

ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಸುವರ್ಣ ವಿಧಾನಸೌಧ, ವಿಟಿಯು‌ ಹಾಗೂ ಆರ್.ಸಿ.ಯು. ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕಳಶಪ್ರಾಯವಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಬೆಳಗಾವಿ ಅಭಿವೃದ್ಧಿಗೆ ಪೂರಕವಾಗಿರುವ ಗ್ರಾಮೀಣ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇದನ್ನು ನಿವಾರಿಸಲು ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 300 ಕೋಟಿ ರೂಪಾಯಿಗೂ ಅಧಿಕ ಅನುದಾನವನ್ನು ಮಂಜೂರು ಮಾಡಿಸಲಾಗಿದೆ.
ಕೆರೆ ತುಂಬಿಸುವ ಯೋಜನೆ ಮುಂದುವರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಹಿರೇಬಾಗೇವಾಡಿ ಗ್ರಾಮದ ಕಸ ವಿಲೇವಾರಿಗೆ ಹತ್ತು ಎಕರೆ ಜಮೀನು ಒದಗಿಸಲು ಲಕ್ಷ್ಮೀ ಹೆಬ್ಬಾಳಕರ ಮನವಿ ಮಾಡಿಕೊಂಡರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ ವಿಶ್ವವಿದ್ಯಾಲಯಕ್ಕೆ ಹಿರೇಬಾಗೇಡಿ ಬಳಿ 126 ಎಕರೆ ವಿಶಾಲವಾದ ಜಾಗೆ ದೊರೆತಿದೆ ಎಂದು ತಿಳಿಸಿದರು.
ವಿವಿ ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳಿಗೆ ಉತ್ಕೃಷ್ಟವಾದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಇದಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ವಿಧಾನಪರಿಷತ್ ಸದಸ್ಯರಾದ ಅರುಣ ಶಹಾಪುರ, ಡಾ.ತಳವಾರ ಸಾಬಣ್ಣ, ಹನಮಂತ‌ ನಿರಾಣಿ, ಸಿಂಡಿಕೇಟ್ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿನಾಯಕ ಮೋರೆ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ಕುಲಪತಿ ಪ್ರೊ.ಬಸವರಾಜ ಪದ್ಮಶಾಲಿ ವಂದಿಸಿದರು.
***

Check Also

ಬೆಳಗಾವಿಯ ಮಾಸ್ಟರ್ ಮೈಂಡ್..ಲಕ್ಕೀ ಸಿಎಂ…ಆಗಬಹುದಾ…??

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.