Breaking News

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬಾಲಚಂದ್ರ ಜಾರಕಿಹೊಳಿ

*ಗೋಕಾಕ- ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

ಗೋಕಾಕ*: ಸಾರ್ವಜನಿಕರ ಯಾವುದೇ ಸಣ್ಣ-ಪುಟ್ಟ ಸಮಸ್ಯೆಗಳಿದ್ದರೂ ಸ್ಥಳದಲ್ಲಿಯೇ ಅಧಿಕಾರಿಗಳು ಪರಿಹರಿಸಬೇಕು. ವಿನಾಕಾರಣ ಅವರಿಗೆ ಅನಗತ್ಯ ತೊಂದರೆಗಳನ್ನು ನೀಡಿದರೇ ಸಹಿಸುವದಿಲ್ಲ. ಅಧಿಕಾರಿಗಳು ತಮಗೆ ನಿಯೋಜಿಸಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಂದ ಅಧಿಕಾರಿಗಳ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದು. ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವದಿಲ್ಲವೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಬುಧವಾರದಂದು ನಗರದ ತಾಲೂಕಾ ಪಂಚಾಯತಿ ಸಭಾ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ ನೀಡುವುದು ಅಧಿಕಾರಿಗಳ ಮೊದಲ ಕೆಲಸವಾಗಬೇಕು ಎಂದು ಸೂಚಿಸಿದರು.

ಸಂಬಂಧಿಸಿದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಜನರ ಅಹವಾಲುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು, ಜೊತೆಗೆ ಸೌಜನ್ಯಯುತವಾಗಿ ವರ್ತಿಸಬೇಕು. ಕೆಲವರು 10 ವರ್ಷಕ್ಕಿಂತ ಮೇಲ್ಪಟ್ಟು ಇಲ್ಲಿಯೇ ಬೀಡಾರ ಹೂಡಿದ್ದಾರೆ. ಇನ್ನು ಮುಂದೆ ಅಂತವರು ಸರಿಯಾದ ಕೆಲಸ ಮಾಡದಿದ್ದರೇ ಅವರಿಗೆ ನಾವೇ ದಾರಿಯನ್ನು ತೋರಿಸಬೇಕಾಗುತ್ತದೆ. ಗೋಕಾಕ-ಮೂಡಲಗಿ ಹೊರತು ಪಡಿಸಿ ಬೇರೆ ತಾಲೂಕುಗಳಿಗೆ ಸ್ವಯಂ ಪೇರಿತರಾಗಿ ವರ್ಗಾವಣೆ ಮಾಡಿಕೊಳ್ಳುವಂತೆಯೂ ಶಾಸಕರು ಸಲಹೆ ನೀಡಿದರು.
ಪಿಡಿಓ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಭೂಮಿ ಸರ್ವೆಯರ್‍ಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಇದೇ ಪರಿಸ್ಥಿತಿ ಮುಂದುವರೆದರೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಮೂಡಲಗಿ ತಾಲೂಕಿನ ಕೆಲವೆಡೆ ವೈದ್ಯರ ಕೊರತೆಯಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಡೆಂಗ್ಯೂ ಜ್ವರ ಸಂಬಂಧ ಮುಂಜಾಗೃತ ಕ್ರಮಗಳನ್ನು ಬೀಗಿಯಾಗಿ ತೆಗೆದುಕೊಳ್ಳಬೇಕು. ರೈತರಿಂದ ಸರ್ವೆಯರ್‍ಗಳು ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದು, ಕೆಲಸಗಳು ಸಹ ಮಂದಗತಿಯಲ್ಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ರೈತರನ್ನು ಸತಾಯಿಸುತ್ತಿದ್ದಾರೆ. ಇಂತಹ ಭೂ ಸರ್ವೆಯರ್‍ಗಳ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕೌಜಲಗಿ, ಮನ್ನಿಕೇರಿ, ಬಗರನಾಳ, ಬೆಟಗೇರಿ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಮೂಡಲಗಿ ತಾಲೂಕಿನಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಕೂಡಲೇ ದುರಸ್ತಿ ಪಡಿಸಬೇಕು. ಜಿ.ಪಂ ನಬಾರ್ಡ, ಸಿಆರ್‍ಎಫ್ ಮತ್ತು ಲೋಕೋಪಯೋಗಿ ಇಲಾಖೆಯ ಅನುದಾನವನ್ನು ಸರ್ಕಾರದಿಂದ ಮಂಜೂರಾತಿ ಪಡೆಯಲು ಅಧಿಕಾರಿಗಳು ಕ್ರೀಯಾ ಯೋಜನೆಗಳನ್ನು ಸಿದ್ದಪಡಿಸಿಕೊಳ್ಳಬೇಕು. ಪ್ರಗತಿಯಲ್ಲಿರುವ ಮತ್ತು ಬಾಕಿ ಉಳಿಸಿರುವ ರಸ್ತೆ ಕಾಮಗಾರಿಗಳನ್ನು ಸ್ವತ: ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಸೂಚಿಸಿದರು.

ಪ್ರಗತಿಯಲ್ಲಿರುವ ಜೆಜೆಎಮ್ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇದರಿಂದ ನಮ್ಮ ಜನರಿಗೆ ಮನೆ ಬಾಗಿಲಿಗೆ ನಲ್ಲಿಯ ಮೂಲಕ ನೀರನ್ನು ಒದಗಿಸಲು ಅನುವು ಮಾಡಿಕೊಡುವಂತೆ ಸೂಚಿಸಿದ ಅವರು, ಕಲ್ಮಡ್ಡಿ ಭಾಗದ ರೈತರಿಗೆ ನೀರಾವರಿ ಸೌಲಭ್ಯವು ಮುಟ್ಟುವಂತೆ ಕ್ರಮ ವಹಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಮೂಡಲಗಿ ತಾಲೂಕು ಮಟ್ಟದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮೀಣ ಜನ ವಸತಿ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಕಾರ್ಯಾಗಾರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *