ಕಪರಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳ ಉದ್ಘಾಟನೆ
ಈ ಜಗತ್ತು ನಿಂತಿರುವುದೇ ದೇವರಿಂದ*
*ದೇವರ ನಾಮ- ಸ್ಮರಣೆ ಮಾಡಿದರೆ ಕಷ್ಟ- ಕಾರ್ಪಣ್ಯಗಳು ದೂರ- ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ-ನಮ್ಮ ಹೆತ್ತವರೇ ನಮಗೆ ನಿಜವಾದ ದೇವರು. ದೇವರ ಸ್ವರೂಪಿಯಾಗಿರುವ ತಂದೆ- ತಾಯಿಯವರಿಗೆ ಗೌರವ ನೀಡುವ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸುವಂತೆ ಅರಭಾವಿ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.
ಶುಕ್ರವಾರ ಸಂಜೆ ತಾಲ್ಲೂಕಿನ ಕಪರಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀದೇವಿ ಮತ್ತು ಭರಮದೇವರ ದೇವಸ್ಥಾನದ ಉದ್ಘಾಟನೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಟಾಪನೆ ನೆರವೇರಿಸಿ ಮಾತನಾಡಿದ ಅವರು, ಭಾರತೀಯರಾದ ನಾವುಗಳು ದೈವ ಪರಂಪರೆಗೆ ಶ್ರದ್ಧಾ ಭಕ್ತಿ ನೀಡುವ ಮೂಲಕ ಧಾರ್ಮಿಕತೆಯನ್ನು ಉಳಿಸಿ, ಬೆಳೆಸುತ್ತಾ ಈ ಭವ್ಯವಾದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದವರು ತಿಳಿಸಿದರು.
ಈ ಜಗತ್ತು ನಿಂತಿರುವುದೇ ದೇವರಿಂದ. ದೇವರು ಎಲ್ಲ ಕಡೆಗಳಲ್ಲೂ ಆವರಿಸಿಕೊಂಡಿದ್ದಾನೆ. ಆದರೆ ನಾವುಗಳು ಯಾರೂ ದೇವರನ್ನು ಸಾಕ್ಷಾತ: ನೋಡಿಲ್ಲ. ಆದರೂ ನಮಗೆ ದೇವರಲ್ಲಿ ನಂಬಿಕೆ, ಭಕ್ತಿ ಇದೆ. ಪ್ರತಿಯೊಂದು ಒಳ್ಳೆಯ ಕೆಲಸಕ್ಕೆ ದೇವರನ್ನು ಸ್ಮರಿಸಿಕೊಂಡು ಪ್ರಾರ್ಥಿಸಿಕೊಳ್ಳುತ್ತೇವೆ. ನಮ್ಮ ಹರಕೆ, ಇಷ್ಟಾರ್ಥಗಳು ಈಡೇರಲಿ ಎಂದು ಬೇಡಿಕೊಳ್ಳುತ್ತೇವೆ. ಇವೆಲ್ಲ ನಾವುಗಳು ದೇವರಲ್ಲಿ ಇಟ್ಟ ನಂಬಿಕೆಗಳು. ನಾವು ದೇವರನ್ನು ನೋಡಲು ಸಾಧ್ಯವಾಗದಿದ್ದರೂ ನಮಗೆ ಜನ್ಮ ಕೊಟ್ಟ ತಂದೆ, ತಾಯಿಯವರನ್ನೇ ದೇವರೆಂದು ಆರಾಧಿಸಬೇಕು. ಗೌರವಿಸಬೇಕು. ಅಂದಾಗ ಮಾತ್ರ ತಮ್ಮ ಜೀವನ ಸುಧಾರಿಸುತ್ತದೆ ಎಂದು ಅವರು ಹೇಳಿದರು.
ಕಪರಟ್ಟಿ ಗ್ರಾಮದ ಜನರು ದೈವಿ ಭಕ್ತರು. ಗ್ರಾಮದ ಒಂದೇ ಸ್ಥಳದಲ್ಲಿ ವರಸಿದ್ಧೇಶ್ವರ, ಹನುಮಂತ ದೇವರು, ಬೀರ ಸಿದ್ಧೇಶ್ವರ, ಬಸವೇಶ್ವರ, ದುರ್ಗಾದೇವಿ ಗುಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಈಗ ಭರಮ ದೇವರು ಮತ್ತು ಶ್ರೀದೇವಿ ದೇವಸ್ಥಾನಗಳನ್ನು ಕಟ್ಟಿಸುವ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಸಣ್ಣ ಗ್ರಾಮವಾದರೂ ಗುಡಿಗಳನ್ನು ನಿರ್ಮಿಸುವ ಮೂಲಕ ದೈವಿ ಪರಂಪರೆಯನ್ನು ಬೆಳೆಸುತ್ತಿರುವ ಕಾರ್ಯಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯ ಆಶ್ರಮದ ಬಸವರಾಜ ಸ್ವಾಮಿಗಳು ಮಾತನಾಡಿ, ಕರ್ನಾಟಕ ನೀರಾವರಿ ನಿಗಮದಿಂದ ೨೫ ಲಕ್ಷ ರೂಪಾಯಿ ಮತ್ತು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ೫ ಲಕ್ಷ ರೂಪಾಯಿ ಸೇರಿ ಒಟ್ಟು ೩೦ ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀದೇವಿ ದೇವಸ್ಥಾನ ಮತ್ತು ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿದ ೪ ಲಕ್ಷ ರೂ ಸೇರಿ ಸುಮಾರು ೮ ಲಕ್ಷ ರೂಪಾಯಿ ವೆಚ್ಚದಲ್ಲಿ ಭರಮ ದೇವರ ದೇವಸ್ಥಾನವನ್ನು ನಿರ್ಮಿಸಲಾಗಿದೆ.ಶಾಸಕರ ಹತ್ತೀರ ಯಾರೇ ತಮ್ಮ ಕಷ್ಟಗಳನ್ನು ಹೇಳಿಕೊಂಡು ಹೋದರೂ ಅವರು ಎಂದೂ ಬರಿಗೈಯಿಂದ ಕಳಿಸಿದ ಉದಾಹರಣೆ ಇಲ್ಲ. ಪ್ರತಿಯೊಬ್ಬರಿಗೂ ತನು,ಮನ,ಧನದ ಸಹಾಯ ಮಾಡುವ ಮೂಲಕ ಬಡವರ ಕಣ್ಣೀರನ್ನು ಒರೆಸುತ್ತಿದ್ದಾರೆ. ಇವರಂಥ ದಯಾಮಯಿ ಶಾಸಕರು ಈ ದೇಶದಲ್ಲಿಯೇ ಸಿಗುವದಿಲ್ಲ. ದಾನ ಧರ್ಮಕ್ಕೆ ಹೆಸರಾದ ಬಾಲಚಂದ್ರ ಜಾರಕಿಹೊಳಿ ಆಧುನಿಕ ಕರ್ಣ ಎಂದು ಬಣ್ಣಿಸಿದರು.
ಕಾರ್ಯಕ್ರಮಕ್ಕೂ ಮೊದಲು ನಡೆದ ಧರ್ಮಸಭೆಯಲ್ಲಿ ಅಂಕಲಗಿ- ಕುಂದರಗಿ ಮಠದ ಅಮರ ಸಿದ್ಧೇಶ್ವರ ಸ್ವಾಮಿಗಳು, ಮುಮ್ಮೇಟ್ಟಗುಡ್ಡದ ಅವಧೂತ ಮಹಾರಾಜರು, ಸುಣಧೋಳಿಯ ಶಿವಾನಂದ ಸ್ವಾಮಿಗಳು, ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು, ಯಲ್ಲಪ್ಪ ಸ್ವಾಮಿಗಳು ಮತ್ತು ತಮ್ಮಣ್ಣ ದೇವಋಷಿ ಭಾಗವಹಿಸಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಇದೇ ಸಂದರ್ಭದಲ್ಲಿ ಬಸವರಾಜ ಸ್ವಾಮಿಗಳು ಗೋಕಾವಿ ಕರ್ಣ ಪ್ರಶಸ್ತಿ ನೀಡಿ ಸತ್ಕರಿಸಿ. ಗೌರವಿಸಿದರು. ವೇದಿಕೆಯಲ್ಲಿದ್ದ ಶ್ರೀಗಳು, ಗಣ್ಯರು ಸೇರಿ ಶಾಸಕರಿಗೆ ಪುಷ್ಪಾರ್ಪಣೆ ಮಾಡಿ ಸತ್ಕರಿಸಿದರು.
ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ, ತಾ.ಪಂ. ಮಾಜಿ ಸದಸ್ಯ ಲಕ್ಷ್ಮಣ ಮುಸಗುಪ್ಪಿ, ಪ್ರಮುಖರಾದ ಅರ್ಜುನ ಬೈಲಾಡಿ, ಬಸು ನಾಯಿಕ, ಬಸು ಕಂಕಣವಾಡಿ, ಸಿದ್ದಪ್ಪ ಹಳ್ಳಿ, ಸಿದ್ಧಾರೂಢ ಖಾನಟ್ಟಿ, ಹೊಳೆಪ್ಪ ಬೈಲಾಡಿ, ಮುತ್ತೆಪ್ಪ ಇಟ್ಟಪ್ಪಗೋಳ, ಸಿದ್ದಪ್ಪ ಖಾನಟ್ಟಿ, ಶ್ರೀಕಾಂತ ಕೌಜಲಗಿ, ವಿಠ್ಠಲ ಬೈಲಾಡಿ, ಸಿದ್ರಾಮ ಖಾನಟ್ಟಿ, ರಾಮನಿಂಗ ಹಳ್ಳಿ, ಬಸು ವ್ಯಾಪಾರಿ, ಮುತ್ತೆಪ್ಪ ಖಾನಟ್ಟಿ, ಲಕ್ಕಪ್ಪ ನಾಯಿಕ, ವಾರೆಪ್ಪ ಕಟ್ಟಿಕಾರ, ಯಲ್ಲಪ್ಪ ಇಟ್ಟಪ್ಪಗೋಳ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
*ಗಮನಸೆಳೆದ ಹಾಡು*- ಡೊಳ್ಳಿನ ಗಾಯಕ ಅರ್ಜುನ ಬೈಲಾಡಿ ಹಾಡಿದ “ಬಾಲಚಂದ್ರ ಸಾಹುಕಾರ ನಮ್ಮ ಪಾಲಿನ ದೇವರು”ಹಾಡು ನೆರೆದವರ ಗಮನ ಸೆಳೆಯಿತು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕುರಿತು ಸ್ವ- ರಚನೆ ಮಾಡಿರುವ ಅರ್ಜನ ಬೈಲಾಡಿ ಅವರ ಹಾಡಿಗೆ ವೇದಿಕೆಯಲ್ಲಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಕೆಲ ಕ್ಷಣ ಭಾವೋದ್ಗಕ್ಕೆ ಒಳಗಾದರು. ನಂತರ ಬೈಲಾಡಿಯವರ ತಂಡದವರನ್ನು ಶಾಸಕರು ಸತ್ಕರಿಸಿದರು.
*ಫೋಟೋ ಕ್ಯಾಪ್ಶನ್- ೯ ಜಿಕೆಕೆ- ೦೧ & ೦೨*
*ಗೋಕಾಕ-* ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಕಪರಟ್ಟಿ ಗ್ರಾಮದಲ್ಲಿ ಶುಕ್ರವಾರದಂದು ಜರುಗಿದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿ ಗೌರವಿಸುತ್ತಿರುವುದು. ಬಸವರಾಜ ಸ್ವಾಮಿ, ಅವಧೂತ ಮಹಾರಾಜರು, ರಾಜೇಂದ್ರ ಸಣ್ಣಕ್ಕಿ, ಲಕ್ಷ್ಮಣ ಮುಸಗುಪ್ಪಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
*ಫೋಟೋ ಕ್ಯಾಪ್ಶನ್- ೯ ಜಿಕೆಕೆ- ೦೩*
*ಗೋಕಾಕ*- ತಾಲ್ಲೂಕಿನ ಕಪರಟ್ಟಿ ಗ್ರಾಮದಲ್ಲಿ ನಡೆದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳನ್ನು ಉದ್ಘಾಟಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿದರು. ಬಸವರಾಜ ಸ್ವಾಮಿ, ಅವಧೂತ ಮಹಾರಾಜರು, ರಾಜೇಂದ್ರ ಸಣ್ಣಕ್ಕಿ, ಲಕ್ಷ್ಮಣ ಮುಸಗುಪ್ಪಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
*ಫೋಟೋ ಕ್ಯಾಪ್ಶನ್- ೯ ಜಿಕೆಕೆ- ೦೪*
*ಗೋಕಾಕ-* ಕಪರಟ್ಟಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀದೇವಿ ದೇವಸ್ಥಾನವನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸುತ್ತಿರುವುದು. ಬಸವರಾಜ ಸ್ವಾಮಿ, ಅವಧೂತ ಮಹಾರಾಜರು, ರಾಜೇಂದ್ರ ಸಣ್ಣಕ್ಕಿ, ಲಕ್ಷ್ಮಣ ಮುಸಗುಪ್ಪಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.