ಬೆಳಗಾವಿ, – ರೈತರು ಮುಖ್ಯ ಬೆಳೆಯ ಜತೆಗೆ ಇತರೆ ಉಪ ಬೆಳೆಗಳನ್ನು ಬೆಳೆಯಬೇಕು; ಇದಲ್ಲದೇ ಹೈನುಗಾರಿಕೆ, ಕುರಿ ಸಾಕಾಣಿಕೆ, ಜೇನು ಸಾಕಾಣಿಕೆ ಮತ್ತಿತರ ಉಪ ಕಸುಬುಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ರೈತರಿಗೆ ಕರೆ ನೀಡಿದರು.
“ರೈತರೊಂದಿಗೊಂದು ದಿನ” ಕಾರ್ಯಕ್ರಮದ ಅಂಗವಾಗಿ ನಿಪ್ಪಾಣಿ ತಾಲ್ಲೂಕಿನ ಭೀವಶಿ ಗ್ರಾಮದ ನರಸಿಂಹ ಯಶವಂತ ಚೌಗಲೆ ಅವರ ಜಮೀನಿನಲ್ಲಿ ಮಂಗಳವಾರ (ಸೆ.28) ಕಬ್ಬಿನ ಬೆಳೆಯ ವಿವಿಧ ನಾಟಿ ಪದ್ಧತಿಗಳ ಪ್ರಾತ್ಯಕ್ಷಿಕೆ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆಗೆ ಸರಕಾರ ಸಬ್ಸಿಡಿ ಒದಗಿಸಿ ರೈತರ ಕೈಬಲಪಡಿಸುತ್ತಿವೆ. ಆದ್ದರಿಂದ ಕೃಷಿ, ಉಪಕಸುಬುಗಳ ಜತೆಗೆ ಮಾರುಕಟ್ಟೆಗೆ ತಕ್ಕಂತೆ ಆಹಾರ ಸಂಸ್ಕರಣೆಯ ಪದ್ಧತಿಯನ್ನು ರೈತರು ರೂಢಿಸಿಕೊಳ್ಳಬೇಕು.
ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ರೈತರು ಆರ್ಥಿಕ ಸ್ಬಾವಲಂಬನೆ ಸಾಧ್ಯವಾಗುತ್ತದೆ. ಒಂದು ಬೆಳೆ ನಷ್ಟವಾದರೆ ಇನ್ನೊಂದು ಬೆಳೆ ಕೈಹಿಡಿಯುತ್ತದೆ.
ಕುರಿ ಸಾಕಾಣಿಕೆ ಕೂಡ ಲಾಭದಾಯಕವಾಗಿದೆ. ಹೈನುಗಾರಿಕೆ, ಕುರಿ ಸಾಕಾಣಿಕೆ, ಜೇನು ಸಾಕಾಣಿಕೆ ಮತ್ತಿತರ ಇಂತಹ ಪರ್ಯಾಯ ಸಾಧ್ಯತೆಗಳು ಮತ್ತು ಉಪಕಸುಬುಗಳ ಕುರಿತು ರೈತರು ಗಮನಹರಿಸಬೇಕು.
ಪ್ರಧಾನಮಂತ್ರಿ ಗಳು ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದಾರೆ. ಈ ಯೋಜನೆಯಡಿ ಬೆಳಗಾವಿ ಜಿಲ್ಲೆಯ 5.48 ಲಕ್ಷ ರೈತರಿಗೆ 2019 ರಿಂದ ಇಲ್ಲಿಯವರೆಗೆ 1090 ಕೋಟಿ ರೂಪಾಯಿ ಲಭಿಸಿದೆ.
ಇತ್ತೀಚಿಗೆ ಸಂಭವಿಸಿದ ಬೆಳೆಹಾನಿಗೆ ಪರಿಹಾರವನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 30 ಕೋಟಿ ರೂಪಾಯಿ ಬೆಳಗಾವಿ ಜಿಲ್ಲೆಗೆ ಲಭಿಸಿದೆ ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಕೃಷಿ ಪದವಿ ಕಾಲೇಜುಗಳಲ್ಲಿ ರೈತರ ಮಕ್ಕಳ ಪ್ರವೇಶ ಕಲ್ಪಿಸಲು ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಇದಲ್ಲದೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ರೈತರ ನೆರವಿಗೆ ಮುಂದಾಗಿದ್ದಾರೆ. ಒಟ್ಟಾರೆ ರೈತ ಸಮುದಾಯದ ಅಭಿವೃದ್ಧಿಗೆ ಸರಕಾರ ಬದ್ಧವಿದೆ ಎಂದು ಹೇಳಿದರು.
ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪ್ರೀತಿ-ವಿಶ್ವಾಸ, ಸಂಭ್ರಮದ ಸ್ವಾಗತಕ್ಕೆ ಚಿರ ಋಣಿಯಾಗಿದ್ದೇನೆ.
ರೈತರು ಸರಕಾರವನ್ನು ಹುಡುಕಿಕೊಂಡು ಹೋದರೂ ಕೆಲವೊಮ್ಮೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಸರಕಾರವನ್ನೇ ರೈತರ ಮನೆಬಾಗಿಲಿಗೆ ಕರೆತರಲಾಗುತ್ತಿದೆ ಎಂದರು.
ನವೆಂಬರ್ 14 , ಮಂಡ್ಯದಿಂದ ಈ ಕಾರ್ಯಕ್ರಮ ಆರಂಭಗೊಂಡು ಇದೀಗ ಹನ್ನೆರಡು ಜಿಲ್ಲೆಯಲ್ಲಿ ನಡೆದಿದೆ ಎಂದು ಸಚಿವ ಪಾಟೀಲ ವಿವರಿಸಿದರು.
ಕೃಷಿ ಕಾಲೇಜು ಮಂಜೂರಾತಿಗೆ ಒತ್ತಾಯ:
ಇದಕ್ಕೂ ಮುಂಚೆ ಮಾತನಾಡಿದ ನಿಪ್ಪಾಣಿಯ ಭೀವಶಿ ಗ್ರಾಮದವರೇ ಆಗಿರುವ ಮುಜರಾಯಿ, ಹಜ್ ಹಾಗೂ ವಕ್ಫ್ ಖಾತೆ ಸಚಿವರಾದ ಶಶಿಕಲಾ ಜೊಲ್ಲೆ ಅವರು, ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವುಗಳ ಪರಿಹಾರದ ನಿಟ್ಟಿನಲ್ಲಿ “ರೈತರೊಂದಿಗೊಂದು ದಿನ” ಕಳೆಯುವುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಸ್ವತಃ ಕೃಷಿ ಸಚಿವರೇ ರೈತರ ಮನೆಯಂಗಳಕೆ ಬಂದು ಅವರೊಂದಿಗೆ ಮುಕ್ತವಾಗಿ ಸಂವಾದ ನಡೆಸುವ ಮೂಲಕ ಕೃಷಿಕರ ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ.
ನಿಪ್ಪಾಣಿ ಕ್ಷೇತ್ರ ಐದಾರು ವರ್ಷಗಳಿಂದ ಪ್ರವಾಹಕ್ಕೆ ತುತ್ತಾದ ಪರಿಣಾಮ ರೈತರು ಕಷ್ಟದಲ್ಲಿದ್ದಾರೆ. ಗಡಿಭಾಗ ಆಗಿರುವುದರಿಂದ ಇಲ್ಲಿನ ರೈತರಿಗೆ ಹೆಚ್ಚಿನ ನೆರವು ಅಗತ್ಯವಿದೆ.
ಗಡಿಭಾಗವಾಗಿರುವ ನಿಪ್ಪಾಣಿ ಭಾಗದಲ್ಲಿ ಕೃಷಿ ಪದವಿ ಕಾಲೇಜು ಸ್ಥಾಪಿಸುವ ಅಗತ್ಯವಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಪ್ರತಿಪಾದಿಸಿದರು.
ದೇಶದಲ್ಲಿ ಮೊದಲ ಬಾರಿಗೆ ಕೃಷಿ ಸಚಿವರೇ ರೈತರ ಜತೆ ಕಳೆಯುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.
ರೈತರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆಯ ವಿಸ್ತರಣಾ ನಿರ್ದೇಶಕರಾದ ಡಾ.ವೆಂಕಟರಾಮರೆಡ್ಡಿ ಮಾತನಾಡಿ, ಸ್ಥಳೀಯ ರೈತರ ಜತೆ ಸಂವಾದದಲ್ಲಿ ಕೇಳಿಬರುವ ಸಲಹೆ-ಸೂಚನೆಗಳನ್ನು ಆಧರಿಸಿ ಸರಕಾರದ ಮಟ್ಟದಲ್ಲಿ ನೀತಿ ನಿರೂಪಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಕಬ್ಬಿನ ನಾಟಿ ಪದ್ಧತಿಗಳ ಕುರಿತ ಕರಪತ್ರಗಳನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಬಿಡುಗಡೆಗೊಳಿಸಿದರು.
ಸೋಯಾಬಿನ್ ಗೆ ಸೂಕ್ತ ದರ ನಿಗದಿ; ಮಾರುಕಟ್ಟೆ ವ್ಯವಸ್ಥೆಗೆ ರೈತರ ಒತ್ತಾಯ..
ಕೃಷಿ ಸಚಿವ ಬಿ.ಸಿ.ಪಾಟೀಲ ಜತೆ ಸಂವಾದ ನಡೆಸಿದ ನಿಪ್ಪಾಣಿ ತಾಲ್ಲೂಕಿನ ಭೀವಶಿ ಗ್ರಾಮದ ರೈತರು ರೈತರು ಬೆಳೆದ ಸಾವಯವ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸೇರಿದಂತೆ ವಿವಿಧ ರೀತಿಯ ಬೇಡಿಕೆಗಳನ್ನು ಮುಂದಿಟ್ಟರು.
ಸೋಯಾಬಿನ್ ಬೆಳೆಗೆ ಸೂಕ್ತ ದರ ನಿಗದಿಪಡಿಸುವಂತೆ ಒತ್ತಾಯಿಸಿದರು.
ಚಿಕ್ಕೋಡಿ-ನಿಪ್ಪಾಣಿಯಲ್ಲಿ ವೇದಗಂಗಾ, ದೂಧಗಂಗಾ ಹಾಗೂ ಕೃಷ್ಣಾ ನದಿಗಳಿವೆ. ಇತ್ತೀಚೆಗೆ ಅತಿವೃಷ್ಟಿಯಿಂದ ಸೊಯಾಬಿನ್ ಬೆಳೆಹಾನಿಯಾಗಿದೆ.
ರೈತರು ಸಂಕಷ್ಟದಲ್ಲಿದ್ದಾರೆ. ಮುಂದಿನ ಬೆಳೆ ಬೆಳೆಯುವ ಪೂರ್ವದಲ್ಲಿಯೇ ಹಿಂದಿನ ಬೆಳೆಹಾನಿ ಪರಿಹಾರ ನೀಡಬೇಕು .
ನದಿತೀರದ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಇದನ್ನು ನಿವಾರಿಸುವ ಮೂಲಕ ರೈತರಿಗೆ ನೆರವಾಗಬೇಕು.
ಸಾವಯವ ಕೃಷಿ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಸಚಿವರಿಗೆ ಒತ್ತಾಯಿಸಿದರು.
ಕೃಷಿ ಇಲಾಖೆ ನಿರ್ದೇಶಕರಾದ ಬಿ.ವೈ.ಶ್ರೀನಿವಾಸ್, ಕೃಷಿ ಇಲಾಖೆಯ ಜಲಾನಯನ ವಿಭಾಗದ ನಿರ್ದೇಶಕರಾದ ನಂದಿನಿ ಕುಮಾರಿ, ಅಪರ ನಿರ್ದೇಶಕರಾದ ಡಾ.ವಿ.ಜೆ.ಪಾಟೀಲ, ಜಾಗೃತ ಕೋಶದ ಜಂಟಿ ನಿರ್ದೇಶಕರು ಜಿಲಾನಿ ಮೊಖಾಶಿ, ಬೆಳಗಾವಿ ಜಂಟಿ ನಿರ್ದೇಶಕರು ಶಿವನಗೌಡ ಪಾಟೀಲ, ಉಪ ನಿರ್ದೇಶಕರಾದ ಡಾ.ಎಚ್.ಡಿ.ಕೋಳೆಕರ್ ಮತ್ತಿತರರು ಉಪಸ್ಥಿತರಿದ್ದರು.
ಎತ್ತಿನಬಂಡಿ ಏರಿಬಂದು ಕಬ್ಬು ನಾಟಿ ಮಾಡಿದ ಸಚಿವರು!
ಹಸಿರುಶಾಲು ಹೊದ್ದು ಎತ್ತಿನ ಬಂಡಿ ಏರಿಬಂದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಕಬ್ಬು ನಾಟಿ ಮಾಡುತ್ತಿದ್ದಂತೆ ಎಲ್ಲೆಡೆ ಜೈ ಜವಾನ; ಜೈ ಕಿಸಾನ್ ಘೋಷಣೆಗಳು ಮೊಳಗಿದವು!
ಭೀವಶಿ ಗ್ರಾಮದ ಶ್ರೀ ಥಳೋಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎತ್ತಿನ ಬಂಡಿ ಏರಿದ ಸಚಿವ ಬಿ.ಸಿ.ಪಾಟೀಲ ಅವರನ್ನು ಝಾಂಜ್, ಡೊಳ್ಳು ಮತ್ತಿತರ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಕಳೆದುಕೊಂಡು ಹೋಗಲಾಯಿತು.
ಅದೇ ಗ್ರಾಮದವರಾದ ಮುಜರಾಯಿ, ಹಜ್ ಮತ್ತು ವಕ್ಫ್ ಖಾತೆ ಸಚಿವರಾದ ಶಶಿಕಲಾ ಜೊಲ್ಲೆ , ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಜತೆ ಎತ್ತಿನಬಂಡಿ ಏರಿ ಸಾಥ್ ನೀಡಿದರು.
ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದರು. ಗ್ರಾಮದಲ್ಲಿ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ತೋರಣ ಕಟ್ಟಿದ್ದರಿಂದ ಇಡೀ ಊರಿನಲ್ಲಿ ಹಬ್ಬದ ಸಂಭ್ರಮ ಕಂಡುಬಂದಿತು.
*****