ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿರುವ ರಾಜ್ಯಮಟ್ಟದ ಸರ್ಕಾರಿ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘ಸುವರ್ಣ ವಿಧಾನಸೌಧದಲ್ಲಿ ಸದಾ ಕ್ರಿಯಾಶೀಲವಾಗಿರಬೇಕು. ಹಾಗಾಗಿ ವಿವಿಧ ಇಲಾಖೆಗಳ ರಾಜ್ಯಮಟ್ಟದ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಸಂಬಂಧ ವಿಧಾನಮಂಡಲ ಅಧಿವೇಶನದಲ್ಲೇ ತೀರ್ಮಾನ ಕೈಗೊಳ್ಳಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸುವರ್ಣ ವಿಧಾನಸೌಧದಲ್ಲಿ ಸಚಿವ ಸಂಪುಟದ ಸಭೆ ನಡೆಸಬೇಕು. ಸೌಧದ ಆವರಣದಲ್ಲೇ ಶಾಸಕರ ಭವನ ನಿರ್ಮಿಸಲು ಅಗತ್ಯ ಅನುದಾನ ಬಿಡುಗಡೆಗೊಳಿಸಿ, ತ್ವರಿತವಾಗಿ ಶಂಕುಸ್ಥಾಪನೆ ನೆರವೇರಿಸಬೇಕು’ ಎಂದು ಆಗ್ರಹಿಸಿದರು.
‘ಸುವರ್ಣ ವಿಧಾನಸೌಧ ಆವರಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಬೇಕು’ ಎಂದು ಒತ್ತಾಯಿಸಿದರು.
ರಾಜ್ಯ ಸಂಚಾಲಕ ಮಹಾದೇವ ತಳವಾರ, ‘ಸುಪ್ರೀಂ ಕೋರ್ಟ್‌ನಲ್ಲಿರುವ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದವನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯ ಸರ್ಕಾರವೂ ಇದೇ ಮಾದರಿಯಲ್ಲಿ ಹೆಜ್ಜೆಯಿಡಬೇಕು. ಗಡಿ ಸಚಿವರನ್ನು ನೇಮಿಸಬೇಕು. ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡನೆಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಸುರೇಶ ಗವನ್ನವರ ಇತರರಿದ್ದರು.