ಬೆಳಗಾವಿ: ನಿಮಗೆ ತಾಕತ್ತು ಇದ್ದರೆ ಬಾದಾಮಿ ಮತಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ನೋಡೋಣ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಸವಾಲು ಹಾಕಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನ್ನ ಸ್ಪರ್ಧೆ ಬಗ್ಗೆ ಮೊಳಕಾಲ್ಮೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಕೆಲಸ ಮಾಡಿದವರಲ್ಲ. ಹಾಗಾಗಿ, ನೀವು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಅಲ್ಲಿನ ಜನರೇ ನಿಮಗೆ ಮಸಿ ಬಳಿಯುತ್ತಾರೆ. ಮೊದಲು ಅವರ ಕ್ಷೇತ್ರ ಯಾವುದು ಎಂಬುದನ್ನು ಘೋಷಿಸಬೇಕು. ಕ್ಷೇತ್ರ ಇಲ್ಲದೇ ಪರದೇಸಿಯಾಗಿ ಓಡಾಡುತ್ತಿರುವವರಿಗೆ ನಾನು ಉತ್ತರ ನೀಡುವುದಿಲ್ಲ ಎಂದರು.
ನನ್ನ ತೀರ್ಮಾನವನ್ನು ಜನರೇ ತೆಗೆದುಕೊಳ್ಳುತ್ತಾರೆ. ನಿಮ್ಮಂತೆ ರಾಜಕಾರಣ ಮಾಡಿಕೊಂಡು ನಾನು ಬಂದಿಲ್ಲ. ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದು ಚೆನ್ನಾಗಿ ಊಟಮಾಡಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿದರು. ಜೊತೆಗಿದ್ದೇ ಡಿ.ಕೆ.ಶಿವಕುಮಾರ, ಜಿ.ಪರಮೇಶ್ವರ ಅವರನ್ನು ಮುಗಿಸಿಕೊಂಡು ಬಂದಿದ್ದೀರಿ. ಈಗ ನನ್ನ ಲಾಯಲ್ಟಿ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದರು.
ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ನಿಮ್ಮನ್ನು ಸ್ವಂತ ಕ್ಷೇತ್ರದ ಜನ ಸೋಲಿಸಿ ಮನೆಗೆ ಕಳುಹಿಸಿದರು. ಅದನ್ನು ನೆನಪು ಮಾಡಿಕೊಳ್ಳಿ. ನಾನು ೩೦ ವರ್ಷ ರಾಜಕಾರಣದಲ್ಲಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಅಧ್ಯಕ್ಷ ಸಂಜಯ ಪಾಟೀಲ, ಮುರುಘೇಂದ್ರ ಪಾಟೀಲ, ಮಾರುತಿ ಅಷ್ಟಗಿ ಮೊದಲಾದವರು ಉಪಸ್ಥಿತರಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ