*ರೈತರಿಗಾಗಿ ಜಾರಿಗೆ ತಂದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿದಿದೆ; ಮಾಜಿ ಸಚಿವೆ ಶಶಿಕಲಾ ಜೊಲ್ಲೆ..!*
ಬೆಳಗಾವಿ: ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ 19 ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿದಿದೆ ಎಂದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರಿಗಾಗಿ ಇರುವ ಬಹುತೇಕ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿದಿದೆ.ಆ ಮೂಲಕ ರೈತಾಪಿ ವರ್ಗಕ್ಕೆ ಈ ಸರ್ಕಾರ ದೊಡ್ಡ ಮಟ್ಟದ ಅನ್ಯಾಯ ಮಾಡಿದೆ ಎಂದರು.
ಕಿಸಾನ್ ಸಮ್ಮಾನ್ ಯೋಜನೆ, ರೈತ ವಿದ್ಯಾನಿಧಿ ಸೇರಿದಂತೆ 19 ಯೋಜನೆಗಳನ್ನು ತಡೆ ಹಿಡಿದಿದೆ.ರೈತರು ದೇಶದ ಬೆನ್ನೆಲುಬು ಎಂದು ಹಲವು ಪಕ್ಷಗಳು ಮಾತನಾಡುತ್ತ ಬಂದಿದ್ದರು.ಆದರೆ, ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಅನುಕೂಲ ಕಲ್ಪಿಸಲು ಕಿಸಾನ್ ಸನ್ಮಾನ ಯೋಜನೆ ಜಾರಿಗೊಳಿಸಿದರು.ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರ 6 ಸಾವಿರ ರೂ ಹಣವನ್ನು ರೈತರ ಅಕೌಂಟಿಗೆ ಹಾಕುತ್ತಿತ್ತು.ಕೇಂದ್ರದ 6 ಸಾವಿರ ಜೊತೆಗೆ ಬಿಎಸ್‌ವೈ ಸಿಎಂ ಆಗಿದ್ದಾಗ 4 ಸಾವಿರ ಹೆಚ್ಚುವರಿ ಹಣ ಘೋಷಿಸಿದರು.ಆದರೆ, ಬಿಜೆಪಿ ಘೋಷಿಸಿದ್ದ 4 ಸಾವಿರ ಹಣವನ್ನು ಈ ಸರ್ಕಾರ ತಡೆ ಹಿಡಿದಿದೆ.ಸರ್ಕಾರದ ನಿರ್ಧಾರದಿಂದ ರೈತಾಪಿ ವರ್ಗ ಆತಂಕಕ್ಕೆ ಸಿಲುಕಿದೆ, ಅನ್ಯಾಯಕ್ಕೆ ಒಳಗಾಗಿದೆ ಎಂದರು.
ಅಲ್ಲದೇ ರೈತರ ಮಕ್ಕಳಿಗೆ ಅನುಕೂಲ ಕಲ್ಪಿಸಲು ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ವಿದ್ಯಾನಿಧಿ ಘೋಷಿಸಿದ್ದರು.ರೈತರು ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದು ಅಧಿಕಾರಿಗಳಾಗಬೇಕೆಂದು ಈ ಯೋಜನೆ ತಂದಿದ್ದೇವೆ.ಆದರೆ ಕಾಂಗ್ರೆಸ್ ಸರ್ಕಾರ ನಮ್ಮೆಲ್ಲ ರೈತಪರ ಯೋಜನೆಗಳನ್ನು ತಡೆ ಹಿಡಿದಿದೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ನಾವು ಸ್ವಾಗತಿಸುತ್ತೇವೆ, ಬಡವರಿಗೆ ಈ ಎಲ್ಲವೂ ತಲುಪಬೇಕು.ನಮ್ಮೆಲ್ಲ ಯೋಜನೆಗಳನ್ನು ಮರಳಿ ಜಾರಿಗೊಳಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಕೆ ನೀಡಿದರು.