ಖಾನಾಪುರ (ಬೆಳಗಾವಿ ಜಿಲ್ಲೆ): ಪ್ರಯಾಣಿಕರ ಕಾರು ರಸ್ತೆ ಪಕ್ಕದ ಮರಕ್ಕೆ ರಭಸವಾಗಿ ಗುದ್ದಿದ ಪರಿಣಾಮ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನ ಚಾಲಕ ಸೇರಿದಂತೆ ಆರು ಜನರು ಮೃತಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಮಂಗೇನಕೊಪ್ಪ ಗ್ರಾಮದ ಹೊರವಲಯದ ಬೀಡಿ-ಬೆಳವಣಕಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದೆ.
ಸ್ವಿಫ್ಟ್ ಡಿಸೈರ್ ಪ್ರಯಾಣಿಕರ ಕಾರಿನಲ್ಲಿ ಕಿತ್ತೂರಿನಿಂದ ಬೀಡಿ ಮಾರ್ಗವಾಗಿ ಖಾನಾಪುರ ತಾಲ್ಲೂಕಿನ ಗೋಲಿಹಳ್ಳಿ ಗ್ರಾಮದ ಕಡೆ ಒಟ್ಟು 10 ಪ್ರಯಾಣಿಕರು ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇವರಲ್ಲಿ ಧಾರವಾಡ ಮೂಲದ ಲಂಗೋಟಿ ಮತ್ತು ರಾಯಬಾಗ ತಾಲ್ಲೂಕಿನ ಹಾರೋಗೇರಿ ಪಟ್ಟಣದ ಜಮಾದಾರ ಕುಟುಂಬದವರು ಇದ್ದರು ಮಂಗೇನಕೊಪ್ಪ ಬಳಿ ವೇಗವಾಗಿ ಸಾಗುತ್ತಿದ್ದ ಕಾರು ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಮರಕ್ಕೆ ರಭಸದಿಂದ ಅಪ್ಪಳಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಅಪಘಾತದ ತೀವ್ರತೆಗೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದು, ಅಪಘಾತದಲ್ಲಿ ಮೃತರನ್ನು ಕಾರಿನ ಚಾಲಕ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಶಹಾಪುರ ನಿವಾಸಿ ಶಾರುಕ್ ಪೆಂಡಾರಿ (30), ರಾಯಬಾಗ ತಾಲ್ಲೂಕು ಹಾರೂಗೇರಿ ನಿವಾಸಿ ಇಕ್ಬಾಲ್ ಜಮಾದಾರ (42), ಅವರ ಪುತ್ರ ಫರಾನ್ ಇಕ್ಬಾಲ್ ಜಮಾದಾರ (12), ಧಾರವಾಡ ನಗರದ ನಿವಾಸಿಗಳಾದ ಸಾನಿಯಾ ಲಂಗೋಟಿ (25), ಉಮ್ರಬೇಗಮ್ ಲಂಗೋಟಿ (20), ಶಬಾನಾ ಲಂಗೋಟಿ (33) ಎಂದು ಗುರುತಿಸಲಾಗಿದೆ.
ಚನ್ನಮ್ಮನ ಕಿತ್ತೂರಿನ ಫರಾಜ ಅಕ್ಖರ್ ಬೆಟಗೇರಿ, ಧಾರವಾಡದ ಸೋಫಿಯಾ ವಸೀಮ್ ಲಂಗೋಟಿ, ಹಾರೂಗೇರಿಯ ಸಾನಿಯಾ ಇಕ್ಬಾಲ್ ಜಮಾದಾರ ಮತ್ತು ಸೋಫಿಯಾ ಮಾಹಿನ್ ಜಮಾದಾರ ಎಂಬ ನಾಲ್ವರು ಗಾಯಗೊಂಡಿದ್ದು, ಅವರೆಲ್ಲರೂ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಬೆಳಗಾವಿ ಎಸ್.ಪಿ ಭೀಮಾಶಂಕರ ಗುಳೇದ ಭೇಟಿ ನೀಡಿ ಪರಿಶೀಲಿಸಿದರು. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಗೆ ಹೊರಟಿದ್ದರು…
ಶುಭ ಸಮಾರಂಭಕ್ಕೆ ಹೊರಟವರನ್ನು ಮಸಣಕ್ಕೆ ಕರೆದೊಯ್ದ ದುರ್ಘಟನೆ ಖಾನಾಪುರ ತಾಲ್ಲೂಕಿನ ಗೋಲಿಹಳ್ಳಿ ಗ್ರಾಮದಲ್ಲಿ ನ ಗುರುವಾರ ಸಂಜೆ ನಿಗದಿಯಾಗಿದ್ದ ತಮ್ಮ ಸಂಬಂಧಿಕರ ವಿವಾಹ ಪೂರ್ವ ಸಮಾರಂಭದಲ್ಲಿ (ವಲೀಮಾ) ಭಾಗವಹಿಸಲು ಲಂಗೋಟಿ ಮತ್ತು ಜಮಾದಾರ ಕುಟುಂಬ ಗುರುವಾರ ಮಧ್ಯಾಹ್ನ ಧಾರವಾಡದಿಂದ ಪ್ರಯಾಣ ಆರಂಭಿಸಿತ್ತು. ಕಿತ್ತೂರು, ಬೀಡಿ ಮಾರ್ಗವಾಗಿ ಕಾರಿನಲ್ಲಿ ಹೊರಟಿದ್ದ ಎರಡೂ ಕುಟುಂಬಕ್ಕೆ ಸೇರಿದ ಐವರು ಮತ್ತು ಇವರನ್ನು ಕಾರ್ಯಕ್ರಮಕ್ಕೆ ಕರೆತರುತ್ತಿದ್ದ ಕಾರಿನ ಚಾಲಕನ ಬಲಿಗೆ ವಿಧಿ ಮಂಗೇನಕೊಪ್ಪದ ಬಳಿ ಹೊಂಚುಹಾಕಿತ್ತು.