ಬೆಳಗಾವಿ: ಅಪ್ರಾಪ್ತ ಮಗಳಿಗೆ ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ ಹಾಗೂ ಆತನ ಸಹೋದರನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ತಂದೆಯೇ ಹತ್ಯೆ ಮಾಡಿರುವ ಘಟನೆ ಸವದತ್ತಿ ತಾಲ್ಲೂಕಿನ ದುಂಡನಕೊಪ್ಪ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ದುಂಡನಕೊಪ್ಪ ಗ್ರಾಮದ ಯಲ್ಲಪ್ಪ ಸೋಮಪ್ಪ ಹಳೇಗೋಡಿ (22), ಮಾಯಪ್ಪ ಸೋಮಪ್ಪ ಹಳೇಗೋಡಿ (20) ಕೊಲೆಯಾದ ಸಹೋದರರು. ಅದೇ ಗ್ರಾಮದ ಫಕೀರಪ್ಪ ಭಾಂವಿಹಾಳ (50) ಕೊಲೆ ಮಾಡಿರುವ ಆರೋಪಿ.
ಆರೋಪಿ ಫಕೀರಪ್ಪನ ಅಪ್ರಾಪ್ತ ಪುತ್ರಿಯನ್ನು ಪ್ರೀತಿಸುವಂತೆ ಮಾಯಪ್ಪ ಹಳೇಗೋಡಿ ಪದೇ ಪೀಡಿಸುತ್ತಿದ್ದನಂತೆ. ಈ ವಿಷಯ ತಿಳಿದು ಪುತ್ರಿಯ ತಂಟೆಗೆ ಬರಬೇಡ ಎಂದು ಆತನಿಗೆ ಎಷ್ಟೇ ಬುದ್ಧಿವಾದ ಹೇಳಿದರೂ ಮಾತ್ರ ಸುಮ್ಮನಾಗದೇ, ತನ್ನ ಹಳೆ ಚಾಳಿ ಮುಂದುವರಿಸಿದ್ದ. ಇದರಿಂದ ಆಕ್ರೋಶಗೊಂಡ ಫಕೀರಪ್ಪ, ಮಾಯಪ್ಪನಿಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಇನ್ನು ಜಗಳ ಬಿಡಿಸಲು ಬಂದ ಯಲ್ಲಪ್ಪನಿಗೂ ಚಾಕುವಿನಿಂದ ಫಕೀರಪ್ಪ ಇರಿದು ಪರಾರಿಯಾಗಿದ್ದ. ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ಯಲ್ಲಪ್ಪನನ್ನು ಕೂಡಲೇ ಗ್ರಾಮಸ್ಥರು ಮತ್ತು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಯಲ್ಲಪ್ಪ ಕೂಡ ಕೊನೆಯುಸಿರೆಳೆದಿದ್ದಾನೆ.
ಸ್ಥಳಕ್ಕೆ ರಾಮದುರ್ಗ ಡಿವೈಎಸ್‌ಪಿ ಹಾಗೂ ಮುರಗೋಡ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆದಿದ್ದರು. ಇಂದು ಆರೋಪಿ ಫಕೀರಪ್ಪ ಭಾಂವಿಹಾಳ ನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದು, ಆರೋಪಿಯ ಪುತ್ರಿ ಅಪ್ರಾಪ್ರ ಬಾಲಕಿಯನ್ನು ನನಗೆ ಮದುವೆ ಮಾಡಿಕೊಡುವಂತೆ ಅವರ ಮನೆಗೆ ಹೋಗಿ ಕೊಲೆಯಾದ ಮಾಯಪ್ಪ ಗಲಾಟೆ ಮಾಡಿದ್ದ. ಅಲ್ಲದೇ ಆತನಿಗೆ ಪರಿ ಪರಿಯಾಗಿ ಹೇಳಿದರೂ ಮಗಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸಿರಲಿಲ್ಲ. ಹಾಗಾಗಿ, ನಿನ್ನೆ ಅಣ್ಣಾ, ತಮ್ಮನ ಮೇಲೆ ಹಲ್ಲೆ ಮಾಡಿದ್ದಾನೆ. ಆತನ ಮುಖ್ಯ ಟಾರ್ಗೆಟ್ ಮಾಯಪ್ಪ ಆಗಿರುತ್ತಾನೆ. ಆದರೆ, ಜಗಳ ಬಿಡಿಸಲು ಬಂದ ಆತನ ಅಣ್ಣ ಯಲ್ಲಪ್ಪನನ್ನೂ ಆರೋಪಿ ಕೊಲೆ ಮಾಡಿದ್ದಾನೆ. ಆರೋಪಿ ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.