ಬೆಳಗಾವಿ: ಸಪ್ತ ನದಿಗಳ ನಾಡಲ್ಲೀಗ ವರುಣನದ್ದೇ ಅಬ್ಬರ. ಜಿಲ್ಲೆ ಹಾಗೂ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತೀರೊ ಮಳೆಯಿಂದ ಮಲಪ್ರಭಾ, ಘಟಪ್ರಭಾ, ಕೃಷ್ಣಾ ಮೊದಲಾದ ನದಿಗಳು ಉಕ್ಕಿ ಹರಿಯುತ್ತಿವೆ.ಜಿಲ್ಲೆಯ ಜಲಾಶಯಗಳಿಗೆ ಜೀವಕಳೆ ಬಂದಿದೆ.
37.731 ಟಿಎಂಸಿ ಗರಿಷ್ಟ ಸಾಮರ್ಥ್ಯದ ಸವದತ್ತಿಯ ನವಿಲುತೀರ್ಥ ಜಲಾಶಯ ಈಗ ಅರ್ಧದಷ್ಟು ಭರ್ತಿಯಾಗಿದ್ದು, ಜು.20ರಂದು 17.220 ಟಿಎಂಸಿ ನೀರು ಸಂಗ್ರಹವಾಗಿದೆ.15,090 ಕ್ಯೂಸೆಕ್ ಒಳಹರಿವು, 194 ಕ್ಯೂಸೆಕ್ ಹೊರಹರಿವು ಇದೆ. ಕಳೆದ ವರ್ಷ ಈ ವೇಳೆ 8.055 ಟಿಎಂಸಿ ನೀರು ಸಂಗ್ರಹವಿತ್ತು.
51 ಟಿಎಂಸಿ ಗರಿಷ್ಟ ಸಾಮರ್ಥ್ಯದ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಶೇ 65ರಷ್ಟು ಭರ್ತಿಯಾಗಿದ್ದು, ಜುಲೈ 20ರಂದಿ 33.646 ಟಿಎಂಸಿ ನೀರು ಸಂಗ್ರಹವಾಗಿದೆ. 25697 ಕ್ಯುಸೆಕ್ ಒಳಹರಿವು, 1,630 ಕ್ಯುಸೆಕ್ ಹೊರಹರಿವು ಇದೆ.
ಬೆಳಗಾವಿ ನಗರಕ್ಕೆ ನೀರುಣಿಸುವ ರಕ್ಕಸಕೊಪ್ಪ ಜಲಾಶಯ ಗರಿಷ್ಠ ಮಟ್ಟ (2474 ಅಡಿ) ತಲುಪಿದ್ದು, ಹೆಚ್ಚುವರಿ ನೀರು ಮಾರ್ಕಂಡೇಯ ನದಿಗೆ ಹರಿಯುತ್ತಿದೆ