ಬೆಳಗಾವಿ- ಬೆಳಗಾವಿ ಜನರ ಎಂತಹ ನಸೀಬು ನೋಡ್ರಿ ಇಲ್ಲಿಯ ಜನ ಡಕೋಟಾ ಬಸ್ಸಿನಲ್ಲಿ ಕುಂತ್ರೂ ಛತ್ರಿ ಹಿಡಿಯಬೇಕು, ಕಚೇರಿ ಒಳಗೆ ಹೋದ್ರೂ ಛತ್ರಿ ಹಿಡಿಯಬೇಕು, ಛಾವಣಿ ಕೆಳಗ ಹೆಂಗ್ ಛತ್ರಿ ಹಿಡೀತಾರ ಅನ್ನೋದು ನೋಡಬೇಕಾದ್ರ ನೀವು ನೇರವಾಗಿ ಬೆಳಗಾವಿ ಡಿಡಿಪಿಐ ಕಚೇರಿಗೆ ಹೋಗಬೇಕು ಹೋಗುವಾಗ ಕಯ್ಯಾಗ ಛತ್ರಿ ಹಿಡ್ಕೊಂಡ ಹೋಗಬೇಕು.
ಬೆಳಗಾವಿ ಐತಿಹಾಸಿಕ ನಗರ, ಕ್ರಾಂತಿಯ ನೆಲ,ರಾಜ್ಯದ ಎರಡನೇಯ ರಾಜಧಾನಿ, ಸ್ಮಾರ್ಟ್ ಸಿಟಿ,ಕುಂದಾನಗರಿ ಎಂದು ಹಲವಾರು ಹೆಸರುಗಳಿಂದ ಬೆಳಗಾವಿಯನ್ನು ಕರೆಯುತ್ತಾರೆ ಈ ಹೆಸರುಗಳ ಜೊತೆಗೆ ಛತ್ರಿ ನಗರಿ ಎಂದು ಕರೆಯುವ ದಿನ ದೂರ ಉಳಿದಿಲ್ಲ
ಮೆಟ್ರೋಪಾಲಿಟನ್ ಸಿಟಿಯಾಗುವ ಹೊಸ್ತಿಲಲ್ಲಿ ಇರುವ ಬೆಳಗಾವಿ ನಗರದಲ್ಲಿ ಇರುವ ಅತೀ ದೊಡ್ಡ ಜಿಲ್ಲೆಯ DDPI ಕಚೇರಿ ಸಂಪೂರ್ಣವಾಗಿ ಸೋರುತ್ತಿದೆ. ಇಲ್ಲಿ ಕೆಲಸ ಮಾಡುವ ನೌಕರರು ಛತ್ರಿ ಹಿಡಿದುಕೊಂಡೇ ದಿನವಿಡಿ ಕೆಲಸ ಮಾಡಬೇಕಾದ ಸಂಕಷ್ಟ ಎದುರಾಗಿದೆ.
ಕಳೆದ ಒಂದು ವರ್ಷದಿಂದ ಫುಲ್ ಟೈಮ್ ಡಿಡಿಪಿಐ ಇಲ್ಲದೇ ಸೊರಗುತ್ತಿರುವ ಈ ಕಚೇರಿ ಈಗ ಸೋರುತ್ತಿದೆ.ಈ ಕಚೇರಿಗೆ ಬರುವವರು,ಅಲ್ಲಿ ಕೆಲಸ ಮಾಡುವವರು ಛಾವಣಿ ಕೆಳಗೆ ಛತ್ರಿ ಹಿಡಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ನಿರಂತರವಾಗಿ ಸೋರುತ್ತಿರುವ ಈ ಕಚೇರಿಯಲ್ಲಿ ಇಲ್ಲಿಯ ಸಿಬ್ಬಂದಿ ಬಕೆಟ್ ಹಿಡಿದು ಸೋರುವ ನೀರು ಸಂಗ್ರಹಿಸಿ ಕಚೇರಿ ದಾಖಲೆ ಪತ್ರಗಳನ್ನು ರಕ್ಷಣೆ ಮಾಡಲು ಪರದಾಡುತ್ತಿದ್ದಾರೆ.
ಬೆಳಗಾವಿಯ RTO ಕಚೇರಿಯನ್ನು ನೆಲಸಮ ಮಾಡಿ ಹೊಸ ಕಡ್ಟಡ ನಿರ್ಮಿಸಿದಂತೆ ಬೆಳಗಾವಿ ಡಿಡಿಪಿಐ ಕಚೇರಿಯನ್ನು ನೆಲಸಮ ಮಾಡಿ, ಹೊಸ ಕಡ್ಟಡ ಕಟ್ಟುವ ಪ್ರಸ್ತಾವನೆಯನ್ನು ರೆಡಿ ಮಾಡುವದು ಅಗತ್ಯವಾಗಿದೆ. ಜೊತೆಗೆ ಆದಷ್ಟು ಬೇಗನೆ ಫುಲ್ ಟೈಮ್ ಡಿಡಿಪಿಐ ಒಬ್ಬರನ್ನು ನೇಮಿಸಲು ಇಲ್ಲಿಯ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕಾಗಿದೆ.
ಸೋರುತಿಹುದು ಕಚೇರಿಯ ಮಾಳಿಗೆ…!!