ಬೆಳಗಾವಿ
ಮೂಢನಂಬಿಕೆ ನಂಬಿ ತನ್ನ ಹೆತ್ತ ಇಬ್ಬರು ಹೆಣ್ಣು ಮಕ್ಕಳನ್ನೇ ಹತ್ಯೆ ಮಾಡಿದ ಆರೋಪಿ ತಂದೆಗೆ ಬೆಳಗಾವಿಯ 6ನೇ ಹೆಚ್ಚುವರಿ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಕಂಗ್ರಾಳಿ ಕೆಎಚ್ ಗ್ರಾಮದ ನಿವಾಸಿ ಅನಿಲ ಚಂದ್ರಕಾಂತ ಬಾದೇಕರ ಶಿಕ್ಷೆಗೆ ಗುರಿಯಾದ ಆರೋಪಿ. ಆರೋಪಿ ತನ್ನ ಮನೆ ಮಾರಾಟಕ್ಕಿಟ್ಟಿದ್ದು, ಆದರೆ, ಖರೀದಿ ಮಾಡಲು ಯಾರೂ ಬರದ ಕಾರಣ ಮಾನಸಿಕವಾಗಿ ನೊಂದಿದ್ದ. ರಾತ್ರಿ ತನ್ನ ಕನಸಿನಲ್ಲಿ ಇಬ್ಬರು ಮಕ್ಕಳನ್ನು ಕೊಂದು ತನ್ನ ರಕ್ತವನ್ನು ಶಿವಲಿಂಗಕ್ಕೆ ಅರ್ಪಣೆ ಮಾಡಿದರೆ ತನ್ನ ಮನೆ ಮಾರಾಟವಾಗುತ್ತದೆ ಎಂದು ನಂಬಿದ್ದ. ತನ್ನ ಮಕ್ಕಳಾದ ಅಂಜಲಿ ( 8) ಮತ್ತು ಅನನ್ಯ ( 4) ಅವರಿಗೆ ಫಿನಾಯಿಲ್ ಕುಡಿಸಿ, ಬಾಯಿ ಒತ್ತಿ ಹಿಡಿದು ಕೊಲೆ ಮಾಡಿ, ಬ್ಲೇಡ್‌ನಿಂದ ತನ್ನ ಕೈಯನ್ನು ಕೊಯ್ದುಕೊಂಡು ಮನೆಯ ಜಗಲಿಯಲ್ಲಿದ್ದ ಶಿವಲಿಂಗಕ್ಕೆ ಅರ್ಪಿಸಿದ್ದ. ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಪಿಐ ಮಂಜುನಾಥ ಹಿರೇಮಠ ಅವರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್.ಎಸ್.ಮಂಜುನಾಥ ಅವರು ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ನಸರೀನ್ ಬಂಕಾಪೂರ ವಾದ ಮಂಡಿಸಿದರು.