ಜಾಗೆ ಹ್ಯಾಂಡ್ ಓವರ್, ರಸ್ತೆ ಹ್ಯಾಂಗ್ ಓವರ್,….!!
ಬೆಳಗಾವಿ – ಮಾನ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ,ಸ್ಮಾರ್ಟ್ ಸಿಟಿ ಎಂಡಿ, ಮತ್ತು ಬೆಳಗಾವಿ ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಬೆಳಗಾವಿಯ ಶಿವಸೃಷ್ಠಿ ಎದುರಿನ ರಸ್ತೆ ಅಗಲೀಕರಣದಲ್ಲಿ ಭೂಸ್ವಾಧೀನ ಮಾಡಿಕೊಳ್ಳದೇ ಆಕ್ರಮವಾಗಿ ನಿರ್ಮಿಸಿದ ರಸ್ತೆಯ ಜಾಗವನ್ನು ಭೂ ಮಾಲೀಕರ ಕುಟುಂಬದವರಿಗೆ ಹಸ್ತಾಂತರ ಮಾಡುವ ಮೂಲಕ ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿದ್ದಾರೆ.
ಇಂದು ಬೆಳಗ್ಗೆ ಬೆಳಗಾವಿ ನಗರದ ಶಿವಸೃಷ್ಠಿ ಪಕ್ಕದ ವಿವಾದಿತ ರಸ್ತೆಗೆ ತೆರಳಿದ ಅಧಿಕಾರಿಗಳು ಜಾಗೆ ಕಳೆದುಕೊಂಡಿದ್ದ ಭೂಮಾಲಿಕ ಬಿಟಿ ಪಾಟೀಲ ಕುಟುಂಬದವರಿಗೆ ದಾಖಲೆಗಳನ್ನು ಹಸ್ತಾಂತರ ಮಾಡುವ ಮೂಲಕ ನ್ಯಾಯಾಲಯದ ಆದೇಶ ಪಾಲಿಸಿ ವಿವಾದಕ್ಕೆ ಅಲ್ಪವಿರಾಮ ಕೊಟ್ಟಿದ್ದಾರೆ.
ಭೂಸ್ವಾಧೀನ ಮಾಡಿಕೊಳ್ಳದೇ ಪರಿಹಾರ ಕೊಡದೇ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಿಸುವದು ಲ್ಯಾಂಡ್ ರಾಬರಿ, ಗೌರವದಿಂದ ಭೂ ಮಾಲೀಕರಿಗೆ ಸೋಮವಾರದ ಒಳಗೆ ಜಾಗೆ ಹಸ್ತಾಂತರ ಮಾಡಬೇಕು ಎಂದು ಮಾನ್ಯ ಹೈಕೋರ್ಟ್ ಸೂಚನೆ ನಿರ್ದೇಶನ ಮಾಡಿದ ಹಿನ್ನಲೆಯಲ್ಲಿ ಅಧಿಕಾರಿಗಳು ಇಂದು ಶನಿವಾರ ಬೆಳಗ್ಗೆ ಜಾಗೆಯನ್ನು ಹಸ್ತಾಂತರ ಮಾಡಿದ್ದಾರೆ.
ರಸ್ತೆಯ ಎರಡೂ ಬದಿಯಲ್ಲಿ ವಿವಾದಿತ ಜಾಗೆಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಸಂಚಾರವನ್ನು ಬಂದ್ ಮಾಡಿದ್ದಾರೆ. ಈ ಮೊದಲು ಜಾಗೆಯ ವಿವಾದದ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿರುವಾಗ, ಮಾನ್ಯ ನ್ಯಾಯಾಲಯ ಪರಿಹಾರ ಕೊಡಲು 20 ಕೋಟಿ ರೂ ಗಳನ್ನು ಉಪ ವಿಭಾಗಾಧಿಕಾರಿಗಳಿಗೆ ಡಿಪಾಜಿಟ್ ಮಾಡುವಂತೆ ಕೋರ್ಟ್ ನಿರ್ದೇಶನ ನೀಡಿತ್ತು ಈ ವಿಚಾರವಾಗಿ ಬೆಳಗಾವಿ ಪಾಲಿಕೆ ನ್ಯಾಯಾಲಯದ ನಿರ್ದೇಶನದಂತೆ ಪಾಲಿಕೆಯಲ್ಲಿ ವಿಶೇಷ ಸಭೆ ನಡೆಸಿ ನ್ಯಾಯಾಲಯದ ನಿರ್ದೇಶನ ಪಾಲಿಸಿತ್ತು ಆದ್ರೆ ವಿಚಾರಣೆ ಮುಂದುರೆದಾಗ ನೀವು ಜಾಗೆ ವಾಪಸ್ ಕೊಡ್ತೀರಾ ಇಲ್ಲ ಪರಿಹಾರ ಕೊಡ್ತೀರಾ ಎಂದು ಮಾನ್ಯ ನ್ಯಾಯಾಧೀಶರು ಪ್ರಶ್ನೆ ಮಾಡಿದ ಸಂಧರ್ಭದಲ್ಲಿ ಜಾಗೆಯ ಮಾಲೀಕರ ನ್ಯಾಯವಾದಿ ಹಾಗು ಪಾಲಿಕೆ ಅಧಿಕಾರಿಗಳು ಇಬ್ಬರೂ ಪರಸ್ಪರ ಜಾಗೆ ವಾಪಸ್ ಕೊಡುವ ವಿಚಾರಕ್ಕೆ ಸಮ್ಮತಿ ನೀಡಿದ ಕಾರಣ ಕೋರ್ಟ್ ನಿರ್ದೇಶನದಂತೆ ಇವತ್ತು ಜಾಗೆಯನ್ನು ವಾಪಸ್ ಕೊಟ್ಟಿದ್ದಾರೆ.