Breaking News

ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ

*ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ*

*ರಾಜ್ಯದಾದ್ಯಂತ ವರ್ಷವಿಡೀ “ಗಾಂಧೀ ಭಾರತ” ಕಾರ್ಯಕ್ರಮ*

*ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ * – ಸಚಿವ ಎಚ್.ಕೆ. ಪಾಟೀಲ*

ಬೆಂಗಳೂರು ಅಕ್ಟೋಬರ್:1924 ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ವಿಶೇಷ ಕಾರ್ಯಕ್ರಮವನ್ನು ಮುಖ್ಯಮಂತ್ರಿಯವರು 2024-25ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಿದ್ದಾರೆ. “ಗಾಂಧೀ ಭಾರತ” ಹೆಸರಿನಲ್ಲಿ ವರ್ಷವಿಡೀ ರಾಜ್ಯದಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬೆಳಗಾವಿಯಲ್ಲಿ ಬರುವ ಡಿಸೆಂಬರ್‍ನಲ್ಲಿ ನಡೆಯುವ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಅಮೇರಿಕದ ಮಾಜಿ ಅಧ್ಯಕ್ಷರಾದ ಬರಾಕ್ ಓಬಾಮಾ ಅವರನ್ನು ಆಹ್ವಾನಿಸುವ ಚಿಂತನೆ ನಡೆದಿದೆ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ಹೇಳಿದರು.

ವಿಧಾನಸೌಧದಲ್ಲಿ ಇಂದು (ಅ.23) ನಡೆದ ಶತಮಾನೋತ್ಸವ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರುವ ಡಿಸೆಂಬರ್‍ನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಜಂಟಿ ಅಧಿವೇಶನಕ್ಕೆ ಮಹಾತ್ಮಾ ಗಾಂಧೀಜಿಯವರನ್ನು ಜಗತ್ತಿನ ನಾಯಕ ಎಂದು ಕರೆದ ಅಮೇರಿಕಾದ ಮಾಜಿ ಅಧ್ಯಕ್ಷರಾಗಿರುವ ಬರಾಕ್ ಓಬಾಮಾ ಅವರನ್ನು ಆಹ್ವಾನಿಸಲು ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿಗಳು ಬರಾಕ್ ಓಬಾಮಾ ಅವರಿಗೆ ಪತ್ರ ಬರೆದು ಆಗಮಿಸಲು ಕೋರುವುದಾಗಿ ತಿಳಿಸಿದ್ದಾರೆ ಎಂದರು. 1924 ರ ಡಿಸೆಂಬರ್ 26-27 ರಂದು ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನ ಜರುಗಿದೆ. ಇದರ ನೆನಪನ್ನು ಮರುಸ್ಥಾಪಿಸಲು ಛಾಯಾಚಿತ್ರ ಪ್ರದರ್ಶನ, ಒಂದು ವರ್ಷ ಕಾಲ ವಸ್ತು ಪ್ರದರ್ಶನ, ಸ್ಮಾರಕ ಸ್ಥಂಭ ಸ್ಥಾಪನೆ ಮತ್ತಿತರ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶಗಳಿವೆ ಎಂದರು.

ಗಾಂಧೀಜಿಯವರಿಗೆ ಆಪ್ತವಾದ ಗ್ರಾಮೀಣಾಭಿವೃದ್ಧಿ ಮತ್ತು ಸ್ವರಾಜ್ ಚಟುವಟಿಕೆಗಳನ್ನು ಸಂಬಂಧಿಸಿದ ಇಲಾಖೆಗಳೊಂದಿಗೆ ಹಮ್ಮಿಕೊಳ್ಳಲಾಗುವುದು. ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಮತ್ತು ಗಾಂಧೀ ವಿಚಾರಗಳ ಪರಿಣಿತರ ಸಲಹೆ ಪಡೆದು ಅರ್ಥಪೂರ್ಣ, ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಎಚ್.ಕೆ. ಪಾಟೀಲ ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಶತಮಾನೋತ್ಸವದ ಅಂಗವಾಗಿ ಒಂದು ವರ್ಷದ ಕಾಲ ಮಹಾತ್ಮಾ ಗಾಂಧೀಜಿಯವರ ಚಿಂತನೆ, ಪ್ರಯೋಗಗಳನ್ನು ಪುನರ್ ಮನನ ಮಾಡುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಮಕ್ಕಳು, ಯುವಜನರ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ನವೆಂಬರ್ 14 ಜವಾಹರಲಾಲ್ ನೆಹರು ಅವರ ಜನ್ಮದಿನದಂದು ನೆಹರು ಅವರು ಗಾಂಧೀಜಿಯವರಿಂದ ಪ್ರಭಾವಿತರಾಗಿ ದೇಶದ ಅಭಿವೃದ್ಧಿಗೆ ಜಾರಿಗೊಳಿಸಿದ ಕಾರ್ಯಕ್ರಮಗಳನ್ನು ಸ್ಮರಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.

ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್. ಶಂಕರ ಮಾತನಾಡಿ, ಗಾಂಧೀ ಮತ್ತು ಭಾರತವನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ಆದ್ದರಿಂದ ಈ ಕಾರ್ಯಕ್ರಮಕ್ಕೆ “ಗಾಂಧೀ ಭಾರತ” ಎಂಬ ಶೀರ್ಷಿಕೆ ನೀಡಲಾಗಿದೆ. ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕøತಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಸಂಬಂಧಿಸಿದ ಇಲಾಖೆಗಳು ತಕ್ಷಣ ಜಾರಿಗೊಳಿಸಬಹುದಾದ, ಮಧ್ಯಮಾವಧಿಯ ಮತ್ತು ಧೀರ್ಘಾವಧಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳ ಪ್ರಮುಖ ಸ್ಥಳಗಳಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿರುವ ಗಾಂಧೀಜಿಯವರ ಭಾವಚಿತ್ರಗಳನ್ನು ಅಳವಡಿಸಲು ಕ್ರಮವಹಿಸಬೇಕು. ಗಾಂಧೀ ಭವನ, ಚಿತ್ರಕಲಾ ಪರಿಷತ್ ಈ ಚಿತ್ರಗಳನ್ನು ಒದಗಿಸಲಿವೆ. ಡಿ.ಎಸ್. ನಾಗಭೂಷಣ್ ಅವರು ಬರೆದ ಗಾಂಧೀ ಕಥನ ಕೃತಿಯನ್ನು ಮುದ್ರಿಸಿ ವಿತರಿಸಲು ಹಾಗೂ ರಿಚರ್ಡ್ ಅಟೆನ್ ಬರೋ ನಿರ್ದೇಶನದ ಮಹಾತ್ಮಾ ಗಾಂಧೀ ಚಲನಚಿತ್ರವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ರಾಜ್ಯದಲ್ಲಿ 57 ಸಾವಿರಕ್ಕೂ ಹೆಚ್ಚು ಶಾಲೆಗಳಿವೆ. ಶೈಕ್ಷಣಿಕ ಕ್ಯಾಲೆಂಡರ್‍ಗೆ ವ್ಯತ್ಯಯವಾಗದಂತೆ ಗಾಂಧೀಜಿಯವರ ಕುರಿತು ಪ್ರಬಂಧ, ಭಾಷಣ, ಚಿತ್ರಕಲೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಗಾಂಧೀಜಿಯವರ ಉಕ್ತಿಗಳು ಹಾಗೂ ಅವರು ಹೇಳಿದ ಏಳು ಸಾಮಾಜಿಕ ಪಾತಕಗಳ ಕುರಿತು ಡಿಜಿಟಲ್ ಮುದ್ರಣಗಳನ್ನು ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಅನಾವರಣಗೊಳಿಸಲು ಕ್ರಮ ವಹಿಸಲಾಗುವುದು.

ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಶತಮಾನೋತ್ಸವ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಆಕರ್ಷಕವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಗಾಂಧೀಜಿಯವರು ಕರ್ನಾಟಕದಲ್ಲಿ ಭೇಟಿ ನೀಡಿದ ಪ್ರಮುಖ ಸ್ಥಳಗಳಲ್ಲಿ ಸ್ಥಳೀಯ ಆಡಳಿತ ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ದೀಪಾಲಂಕಾರ ಮಾಡಲು ಕ್ರಮ ವಹಿಸುವುದಾಗಿ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಹೊಸ ತಂತ್ರಜ್ಞಾನದ ಮೂಲಕ ಬೆರಳ ತುದಿಯಲ್ಲಿ ಗಾಂಧೀಜಿಯವರ ಮಹತ್ವ ಕುರಿತ ಮಾಹಿತಿಗಳನ್ನು ಯುವಜನರು ಮತ್ತು ಹೊಸ ಪೀಳಿಗೆಗೆ ಮರುಪರಿಚಯಿಸುವ ಹಾಗೂ ಜಾಗತಿಕವಾಗಿ ಸುಮಾರು 100 ಕ್ಕೂ ಹೆಚ್ಚು ದೇಶಗಳಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ಮತ್ತು ಸಂಬಂಧಿತ ಸ್ಥಳಗಳ ಕುರಿತ ಮಾಹಿತಿಯನ್ನು ಯುವಜನರು ಮತ್ತು ಹೊಸಪೀಳಿಗೆಗೆ ಪರಿಚಯಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗಳ ಮೂಲಕ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಆಗಿ 30 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವರಾಜ್ ಸಮ್ಮೇಳನಗಳನ್ನು ರಾಜ್ಯದಲ್ಲಿ ಪ್ರಾದೇಶಿಕವಾರು ಆಯೋಜಿಸಲಾಗುವುದು. ಗಾಂಧೀ ಮತ್ತು ಬಸವಣ್ಣನವರ ವಿಚಾರಗಳಿಗೆ ಸಂಬಂಧಿಸಿದಂತೆ ಕಾಯಕ ಪಂಚಾಯಿತಿ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಅಕಾಡೆಮಿಗಳ ಮೂಲಕ ಹಿಂದಿ, ಉರ್ದು, ತುಳು, ಕೊಡವ, ಕೊಂಕಣಿ, ಲಂಬಾಣಿ ಮತ್ತಿತರ ಭಾಷೆಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಕುರಿತು ಕಿರುಪುಸ್ತಕಗಳನ್ನು ಪ್ರಕಟಿಸಿ ವಿತರಿಸಲಾಗುವುದು ಎಂದರು.

ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಗಾಂಧಿ ಭಾರತ ಕಾರ್ಯಕ್ರಮದ ಸ್ಮರಣಾರ್ಥ ರಾಜ್ಯದ ಪ್ರಮುಖ ಸ್ಥಳಗಳಲ್ಲಿ 100 ಲಕ್ಷ ಸಸಿಗಳನ್ನು ಹೆಚ್ಚುವರಿಯಾಗಿ ನೆಡಲು ಕ್ರಮವಹಿಸಲಾಗುವುದು ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಗಾಂಧೀ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಕೆಲವು ವಿಶ್ವವಿದ್ಯಾಲಯಗಳಲ್ಲಿರುವ ಗಾಂಧೀ ಅಧ್ಯಯನ ವಿಭಾಗಗಳ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದರು.

ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಮುಖ್ಯಮಂತ್ರಿಯವರ ನೀತಿ ಮತ್ತು ಕಾರ್ಯಕ್ರಮದ ಸಲಹೆಗಾರ ಬಿ.ಆರ್. ಪಾಟೀಲ, ಶಾಸಕರಾದ ಜೆ.ಟಿ. ಪಾಟೀಲ, ಅಲ್ಲಮಪ್ರಭು ಪಾಟೀಲ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ, 2024 ನೇ ಸಾಲಿನ ಗಾಂಧೀ ಸೇವಾ ಪ್ರಶಸ್ತಿ ಪುರಸ್ಕೃತ ಪ್ರೊ. ಜಿ.ಬಿ. ಶಿವರಾಜು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಕಾರ್ಯಾಧ್ಯಕ್ಷ ಎನ್.ಆರ್. ವಿಶುಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಬಿ. ಕಾವೇರಿ, ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸಲ್ಮಾ ಕೆ. ಫಾಹಿಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅಜಯ್ ನಾಗಭೂಷಣ್, ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *