ಮಹಿಳಾ ಸಬಲೀಕರಣಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ, ಮಾ.24(ಕರ್ನಾಟಕ ವಾರ್ತೆ):ಮಹಿಳೆಯರು ಸಬಲರಾಗಿ ದೇಶವನ್ನು ಮುನ್ನಡೆಸಬೇಕಿದೆ. ಹೆಣ್ಣು-ಗಂಡು ಸಮಾನರು ಎಂಬ ಬಸವಣ್ಣನವರ ತತ್ವದಂತೆ ಸಿದ್ದರಾಮಯ್ಯನವರ ಸರ್ಕಾರ ನಡೆಯುತ್ತಿದೆ. ಸರ್ಕಾರದಿಂದ ರಾಜ್ಯದ ಪ್ರತಿಯೊಂದು ಅಂಗನವಾಡಿಗಳನ್ನು ಉನ್ನತ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸಿ.ಪಿ.ಎಡ್ ಮೈದಾನದಲ್ಲಿ ಸೋಮವಾರ (ಮಾ.24) ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ, ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ವಿಕಲಚೇತನರಿಗೆ ವಿವಿಧ ಸಾಧನ ಸಲಕರಣೆಗಳ ವಿತರಣೆ, ವಿಭಾಗೀಯ ಮಟ್ಟದ ಸ್ತ್ರೀ ಶಕ್ತಿ ಗುಂಪುಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲೇ ವಿಶೇಷ ಮತ್ತು ವಿನೂತನ ಕಾರ್ಯಕ್ರಮ ಇದಾಗಿದೆ. ಜಿಲ್ಲೆಯಲ್ಲಿ ಗರ್ಭಿಣಿಯರಿಗೆ ಕಾಲಕಾಲಕ್ಕೆ ಪೌಷ್ಟಿಕ ಆಹಾರ, ವೈದ್ಯಕೀಯ ಚಿಕಿತ್ಸೆಯನ್ನು ಇಲಾಖೆಯಿಂದ ಒದಗಿಲಾಗುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಒದಗಿಸಲಾಗುತ್ತಿದೆ. ಪ್ರತಿ ಮನೆಗಳಿಗೆ ಗೃಹ ಜ್ಯೋತಿಯಡಿ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದರು.
ಗರ್ಭಿಣಿ ಮಹಿಳೆಯರ ಮಾನಸಿಕತೆ ಚೆನ್ನಾಗಿರಬೇಕು. ದೇಶಕ್ಕೆ ಉತ್ತಮ ಜ್ಞಾನವಂತ ಪ್ರಜೆ ಸಿಗಬೇಕು ಹಾಗಾಗಿ ಗರ್ಭಾವಸ್ಥೆಯಲ್ಲಿ ಮಗು ಧನಾತ್ಮಕವಾಗಿರಬೇಕು ಎಂಬ ಉದ್ದೇಶದಿಂದ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗರ್ಭಿಣಿಯರು ತಾವು ಹೆರುವ ಮಕ್ಕಳನ್ನು ಭಾರತ ದೇಶಕ್ಕೆ, ರಾಜ್ಯಕ್ಕೆ ಉತ್ತಮ ಕೊಡುಗೆಯಾಗಿ ನೀಡಲಿದ್ದಾರೆ.
ಹಿರಿಯ ನಾಗರಿಕರ ಜಿಲ್ಲಾ ಕಮಿಟಿಯ ನೇತೃತ್ವದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನಿಸಲಾಗುವುದು. ಇಲಾಖೆಯ ಎಲ್ಲ ಅಧಿಕಾರಿ ಸಿಬ್ಬಂದಿಗಳ ಶ್ರಮದಿಂದ ಸೀಮಂತ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಸೀಮಂತ ಕಾರ್ಯಕ್ರಮ ಏರ್ಪಡಿಸಲು ಸರ್ಕಾರ ಆದೇಶ ಹೊರಡಿಸಲಿದೆ ಎಂದು ಸಚಿವ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು.
ಮಗು ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮ, ಭಾಗ್ಯಲಕ್ಷ್ಮಿ ಯೋಜನೆಯ ಸುಕನ್ಯಾ ಸಮೃದ್ಧಿ 5 ಫಲಾನುಭವಿಗಳಿಗೆ ಪಾಸ್ ಬುಕ್ ವಿತರಣೆ, ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆಗೆ ಹಾಗೂ ಅತ್ಯುತ್ತಮ ಸ್ತ್ರೀ ಶಕ್ತಿ ಸಂಘದವರಿಗೆ ಸನ್ಮಾನಿಸಲಾಯಿತು.
ಜಾಗೃತಿ ರಂಗೋಲಿ ಚಿತ್ರ ಪ್ರದರ್ಶನ:
ಕಾರ್ಯಕ್ರಮದಲ್ಲಿ ಪೋಷಣ್ ಅಭಿಯಾನ, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಸೇರಿದಂತೆ ವಿವಿಧ ಜಾಗೃತಿ ರಂಗೋಲಿ ಚಿತ್ರಗಳನ್ನು ಪ್ರದರ್ಶಿಸಲಾಯಿತು. ವಿವಿಧ ಸ್ತ್ರೀ ಶಕ್ತಿ ಗುಂಪುಗಳ ಮಾರಾಟ ಮಳಿಗೆ ಮತ್ತು ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಬೆಳಗಾವಿ ವಿಭಾಗಾಧಿಕಾರಿ ಶ್ರವಣ್ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ, ವಿಕಲಚೇತನರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ, ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸೀಮಂತ ಕಾರ್ಯಕ್ರಮ:
ಇದಕ್ಕೂ ಮುಂಚೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸಾಮೂಹಿಕವಾಗಿ 3 ಸಾವಿರ ಗರ್ಭಿಣಿಯರಿಗೆ (ಉಡಿ ತುಂಬುವ ಮೂಲಕ) ಸಾಂಕೇತಿಕವಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದರು.
ಅಂಗವಿಕಲರಿಗೆ ಸಾಧನ ಸಲಕರಣೆಗಳ ವಿತರಣೆ, ಬ್ರೈಲ್ ಲಿಪಿ, ಲ್ಯಾಪ್ ಟಾಪ್, ಬ್ರೈಲ್ ವಾಚ್, ಹೋಲಿಗೆ ಯಂತ್ರ ಹಾಗೂ ಸ್ಕೂಟರ್ ವಿತರಿಸಲಾಯಿತು.
ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಣೆ:
ಬಳಿಕ ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ನೂರು ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಬಳಿಕ ವಿವಿಧ ಸ್ತ್ರೀ ಶಕ್ತಿ ಸಂಘಗಳ ಕಲಾಕೃತಿ, ಖಾದಿ ಬಟ್ಟೆ, ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆಗಳು ಹಾಗೂ ವಸ್ತು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದರು.
***