ರಸ್ತೆ ಸುರಕ್ಷತೆಗೆ ಅಗತ್ಯ ಕ್ರಮ ಕೈಗಳ್ಳೊಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ
ಬೆಳಗಾವಿ, -ಅಪಘಾತಗಳ ತಡೆಗೆ ರಸ್ತೆ ಸುರಕ್ಷತ ಕ್ರಮಗಳನ್ನು ಕೈಗೊಳ್ಳುವುದು ಅತೀ ಮುಖ್ಯ. ನಗರದಲ್ಲಿ ಸಂಚಾರ ವ್ಯವಸ್ಥೆ ಉತ್ತಮ ನಿರ್ವಹಣೆಯಾಗುವಂತೆ ಸುರಕ್ಷತಾ ಆಧಾರದ ಮೇಲೆ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜು.30) ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸ್, ಸಾರಿಗೆ, ಲೋಕೋಪಯೋಗಿ ಇಲಾಖೆಗಳು ರಸ್ತೆಗಳಲ್ಲಿ ಸಂಚಾರ ಸುಗಮವಾಗಿ ಸಾಗುವಂತೆ ನೋಡಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಒಟ್ಟು 22 ಟ್ರಾಫಿಕ್ ಸಿಗ್ನಲ್ ಗಳು ಕಾರ್ಯ ನಿರ್ವಹಿಸುತ್ತಿವೆ. ನಗರದ 7 ಜಂಗ್ಷನ್ ನಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ ಎಂದರು.
ಲೋಕೋಪಯೋಗಿ ಇಲಾಖೆಯಿಂದ ಟ್ರಾಫಿಕ್ ಸಮಸ್ಯೆ ನಿರ್ವಹಣೆಗೆ ಅಗತ್ಯವಿರುವ (ಪ್ಲಾನಿಂಗ್) ಯೋಜನಾ ಸಂಸ್ಥೆಗಳ ಟೆಂಡರ್ ಕರೆದು ಟ್ರಾಫಿಕ್ ನಿರ್ವಹಣೆಯ ಪ್ರಾಜೆಕ್ಟ್ ಪಡೆದುಕೊಳ್ಳಬೇಕು ಎಂದು ಹೇಳಿದರು.
ಟೆಂಡರ್ ಪ್ರಕ್ರಿಯೆ ಹಂತದಕ್ಕೂ ಮೊದಲು ಟ್ರಾಫಿಕ್ ನಿರ್ವಹಣೆ ಪ್ರಾಜೆಕ್ಟ್ ವರದಿ ನೀಡುವ ಸಂಸ್ಥೆಗೆ ಷರತ್ತುಬದ್ಧ ನಿಯಮಗಳನ್ನು ಪಾಲಿಸುವಂತೆ ಸೂಚಿಸಬೇಕು. ನಗರದಲ್ಲಿ ಒಟ್ಟು 4 ಕಿ. ಮೀ ಅಂದಾಜು ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು. ರಸ್ತೆ ಸುರಕ್ಷಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದರು.
ಯೋಜನಾ ವರದಿ:
ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿ ಟ್ರಾಫಿಕ್ ನಿರ್ವಹಣಾ ಯೋಜನೆಯ ಡಿಪಿಆರ್ ಈಗಾಗಲೇ ಕಲಬುರ್ಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಕಾರ್ಯ ರೂಪಕ್ಕೆ ತರಲಾಗಿದ್ದು, ಅದೇ ರೀತಿಯಲ್ಲಿ ಬೆಳಗಾವಿ ನಗರದಲ್ಲಿಯೂ ಸಹ ರಸ್ತೆ ಸುರಕ್ಷತಾ ಮತ್ತು ಟ್ರಾಫಿಕ್ ನಿರ್ವಹಣೆ ಯೋಜನೆಗಳನ್ನು ಮಾಡುವ ಯೋಜನೆಯಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಎ.ಐ ತಂತ್ರಜ್ಞಾನ- ವಾಹನಗಳ ಮಾದರಿ ಪತ್ತೆ:
ಟ್ರಾಫಿಕ್ ಸಿಗ್ನಲ್ ಗಳಲ್ಲಿ ದ್ವಿಚಕ್ರ ವಾಹನ, ನಾಲ್ಕು ಚಕ್ರ. ಬಸ್ ಸೇರಿದಂತೆ ವಿವಿಧ ಮಾದರಿಯ ಒಟ್ಟು ವಾಹನಗಳ ಸಂಚರಿಸುವ ಮಾಹಿತಿ ಓದುವಂತೆ ಆರ್ಟಿಫಿಷಿಯಲ್ ಇಂಟಲಿಜೆಂಟ್ ಸಾಫ್ಟವೇರ್ ಮೂಲಕ ಅಂಕಿ-ಅಂಶ ಒದಗಿಸಲು ಈಗಾಗಲೇ ಬಾಗಲಕೋಟೆ ಜಿಲ್ಲೆಯಲ್ಲಿ ಸಾಫ್ಟವೇರ್ ಬಳಕೆ ಮಾಡಲಾಗುತ್ತಿದೆ.
ಅದೇ ರೀತಿಯಲ್ಲಿ ನಗರದಲ್ಲಿ ಸ್ಮಾರ್ಟ್ ಸಿಟಿ ಕ್ಯಾಮೆರಾಗಳು ಅವಡಿಕೆಯಾದಲ್ಲಿ ಎ.ಐ ತಂತ್ರಜ್ಞಾನ ಮೂಲಕ ಟ್ರಾಫಿಕ್ ಡೇಟಾ ಸಂಗ್ರಹಿಸಬಹುದು ಎಂದು ಲೋಕೋಪಯೋಗಿ ಇಲಾಖೆ ತಾಂತ್ರಿಕ ಸಹಾಯಕರು ಸಲಹೆ ನೀಡಿದರು.
ನಗರ ಪೊಲೀಸ್ ಆಯುಕ್ತರಾದ ಭೂಷಣ್ ಗುಲಾಬರಾವ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
***